My view about Made Madesnaana :)


ಆತ್ಮೀಯರೇ,
ಕೆಲದಿನಗಳಿಂದ, ಕುಕ್ಕೆ ದೇವಸ್ಥಾನದಲ್ಲಿ ಶತಮಾನಗಳಿಂದ ನಡೆದುಕೊಂಡು ಬರುತ್ತಿರುವ ಮಡೆ ಮಡೆಸ್ನಾನದ ಬಗ್ಗೆ ಕೇಳಿ ಬರುತ್ತಿರುವ ವಿರೋಧದ ಬಗ್ಗೆ ನನ್ನ ಎರಡು ಅನಿಸಿಕೆಗಳನ್ನು ಹಂಚಿಕೊಳ್ಳಲು ಬಯಸುತ್ತೇನೆ.

ಎಂತದಿದು ಮಡೆ ಮಡೆಸ್ನಾನವೆಂದರೆ?

ಸುಲಭದ ಮಾತಲ್ಲಿ ಹೇಳುವುದಾದರೆ,
ಸುಬ್ರಹ್ಮಣ್ಯದಲ್ಲಿ ಪ್ರತಿ ವರ್ಷ "ಕುಕ್ಕೆ ಷಷ್ಠಿ"ಯ ಆಚರಣೆಯ ದಿನಗಳಲ್ಲಿ, ಪೂಜೆ ಮತ್ತು ಅಂಗಣದಲ್ಲಿ ಪ್ರಸಾದ ಭೋಜನ ಆದಮೇಲೆ - ಉಂಡ ಎಲೆ ತೆಗೆಯುವ ಮೊದಲೇ ಅಲ್ಲೇ ನಡೆಯುವ ಉರುಳು ಸೇವೆ.
"ಸೇವೆ ಮಾಡುವೆ" ಎಂದು ಹರಕೆ ಹೊತ್ತವರು, ಸಂಕಲ್ಪ ಮಾಡಿಕೊಂಡವರು ಮತ್ತು ಆಸಕ್ತರು ಶ್ರಧ್ಧೆಯಿಂದ ಮಾಡುವ ಸೇವೆಯಿದು.
ಇವರಲ್ಲಿ ಅದೇ ಊರಿನವರು, ಪಕ್ಕದ ಊರಿನವರು ಮತ್ತು ಸೇವೆ ಮಾಡಲೆಂದೇ ದೂರದ ಊರುಗಳಿಂದ ಬರುವ ಜನರುಂಟು..!!
ಜಾತಿಯಿಲ್ಲ - ಮತವಿಲ್ಲ - ಆಚಾರ ವಿಚಾರ ಬೇಧ ಕೇಳುವುದಿಲ್ಲ. ಶ್ರಧ್ಧೆಯೊಂದೇ ಮಾನದಂಡ..!!
ವಯಸ್ಸಿನ ಅತೀ ಎನಿಸುವ ನಿರ್ಬಂಧವಿಲ್ಲ, ಇಚ್ಛೆ ಇದ್ದವರು ಮಾಡುವ ಸೇವೆ.
ಕೆಲವರು ಬರೇ ನೆಲದಲ್ಲಿ ಉಣ್ಣುತ್ತಾರೆ, ಈ ಸೇವೆಯೂ ಉಂಟು.
ಈ ಸೇವೆಗಳು ಉಡುಪಿ ಕೃಷ್ಣ ಮಠದಲ್ಲೂ ಉಂಟು.

ಎಂತಕೆ ವಿರೋಧ?

ಹೆಚ್ಚಿನ ದೇವಸ್ಥಾನಗಳಲ್ಲಿ ಇರುವಂತೆ ಈ ದೇವಸ್ಥಾನದಲ್ಲೂ ಬ್ರಾಹ್ಮಣರಿಗೆ ಆ ದಿನಗಳಲ್ಲಿ ವಿಶೇಷ ಊಟದ ಪಂಕ್ತಿಯುಂಟು.
ಮಡೆ ಮಡೆಸ್ನಾನ ಸೇವೆ ನಡೆಯುವುದು ಅಲ್ಲೇ..!
ಬ್ರಾಹ್ಮಣರು ಉಂಡಲ್ಲಿ ಉಳಿದವರು ಹೊರಳುತ್ತಾರೆ, ಇದು ಉರುಳುಸೇವೆ ಮಾಡುವವರ ಜಾತಿಗೆ ಅವಮಾನ,
ಹಾಗಾಗಿ ಈ ಕ್ರಮವನ್ನು ನಿಲ್ಲಿಸಬೇಕು ಎಂಬುದು ವಾದ.

ಸೇವೆಯ ಪರವಾಗಿ ಇರುವವರ ವಾದ:
  • ಇದು ಶತಮಾನಗಳಿಂದ ಆಚರಿಸಿಕೊಂಡು ಬರುತ್ತಾ ಇರುವಂಥದ್ದು.
  • ಯಾರಿಗೆ ಯಾರೂ ಒತ್ತಾಯ ಮಾಡುವುದಿಲ್ಲ, ಎಲ್ಲರೂ ಸ್ವಂತ ಇಚ್ಛೆಯಿಂದ ಬರುವವರು.
  • ಇದರಿಂದ ಚರ್ಮರೋಗಗಳು ವಾಸಿಯಾಗುತ್ತದೆ ಎಂಬ ನಂಬಿಕೆಯಿದೆ.
  • ಉಸಿರಾಟ ಮತ್ತು ನಮ್ಮ ಚಕ್ರಗಳ ಸಮತೋಲನಕ್ಕೆ ಪ್ರದಕ್ಷಿಣೆ ಮತ್ತು ಉರುಳುಸೇವೆಗಳು ಸಹಾಯಕ.
  • ಯಾವುದೇ ಒಂದು ಜಾತಿ ಸೇವೆ ಮಾಡುವುದು ಅಲ್ಲ, ಬ್ರಾಹ್ಮಣರೂ ಮಾಡುತ್ತಾರೆ ಇಲ್ಲಿ ಜಾತಿ ಇಲ್ಲ.
  • ಮನಶ್ಯಾಂತಿಗಾಗಿ ಮಾಡುವವರೇ ಅಧಿಕ. ಮಡೆ ಮಡೆಸ್ನಾನದಿಂದ ಅವರಿಗೆ ಖುಶಿ ಸಿಗುತ್ತದಾದರೆ ಅಡ್ಡಿ ಏಕೆ?
ವಿರೋಧಿಸುವವರ ವಾದ:
  • ಇದರಿಂದ ಆತ್ಮ ಗೌರವಕ್ಕೆ ಕುಂದು ಉಂಟಗುತ್ತದೆ.
  • ಇದಕ್ಕೆ ಯಾವುದೇ ವೈಜ್ನಾನಿಕ ಆಧಾರ ಕಂಡುಬರುವುದಿಲ್ಲ.
  • ಬ್ರಾಹ್ಮಣರು ಉಂಡ ಎಲೆಯಲ್ಲೇ ಯಾಕೆ? 
  • ಒಂದು ಜಾತಿ ಇನ್ನೊಂದಕ್ಕಿಂತ ಕೀಳು ಎಂಬರ್ಥದ ಆಚರಣೆ ಇದು.
  • ಇದನ್ನು ಸಮರ್ಥಿಸಿಕೊಂಡರೆ - ಬೆತ್ತಲೆಸೇವೆ, ಮಲಹೊರುವಿಕೆಮುಂತಾದ ಅನೇಕ ಅನಿಷ್ಠ ಪಧ್ದತಿಗಳನ್ನೂ ಒಪ್ಪಿಕೊಳ್ಳಬೇಕಾಗುತ್ತದೆ.
ದೇವರನ್ನು ಕಾಣಾಬೇಕಾದ ಆತ್ಮ ಗೌರವ ಇಟು ಕೊಂಡು ಸಾಧ್ಯವಿಲ್ಲ, ಶೂನ್ಯವಾದ ಮಾತ್ರ ಸಾಧ್ಯ.
ದೇವರೆದುರು ಎಲ್ಲರೂ ಸಮಾನರೇ, ಯಾರೂ ಮೇಲು ಕೀಳೆಂದು ಇಲ್ಲ.
ಬೆತ್ತಲೆ ಸೇವೆ ಮತ್ತು ಮಲಹೊರುವಂಥದ್ದು ನಿಜಕ್ಕೂ ಅನಿಷ್ಠ ಪಧ್ಧತಿಗಳೇ, ಅವುಗಳ ನಿಷೇಧ ಆಗಬೇಕಾದ್ದೇ...!!
ಇವುಗಳ ಹೋಲಿಕೆ ಸರಿ ಅಲ್ಲ
ತುರುವೇಕೆರೆ ಬೇಟೆರಾಯ ಸ್ವಾಮಿ ದೇವಸ್ತಾನದಲ್ಲಿ (ವಿಷ್ಣುವಿನ ದೇವಸ್ತಾನ ) ಶತಮಾನಗಳಿಂದ
ಕೆಳವರ್ಗದವರ ಉಂಡೆಲೆ ಮೇಲೆ ಬ್ರಾಹ್ಮಣರ ಮಡೆಸ್ನಾನ ಆಚರಣೆಯೂ ನಡೆಯುತ್ತಾ ಬಂದಿದೆ. ಇದರ ಬಗ್ಗೆ ಮಾತೇಕಿಲ್ಲ?
ಎಂಬುದು ಸೇವೆ ಮಾಡುವವರ ಪ್ರತಿವಾದ.
ದೇವಸ್ಥಾನದ ಆಡಳಿತ ಮಂಡಳಿ ಮತ್ತು ಊರಜನ ಇನ್ನೂ ಸೇವೆ ಮಾಡಬೇಕೆಂಬುದನ್ನೇ ಬಯಸುತ್ತಿದ್ದಾರೆ,
ತಲೆತಲಾಂತರಗಳಿಂದ ನಡೆದುಕೊಂಡು ಬರುತ್ತಿರುವ ಆಚರಣೆಯನ್ನು ನಿಲ್ಲಿಸಲು ಅವರಾರಿಗೂ ಇಷ್ಟವಿಲ್ಲ.

ಹಾಗದರೆ ವಿರೋಧ ಯಾರಿಂದ?
  • ದೇವರು ಎನ್ನುವ ಒಂದು Concept ಅನ್ನು ನಂಬದೇ ಇರುವವರಿಂದ,
  • ವಿಚಾರವಾದಿ - ಪ್ರಗತಿಪರ ಚಿಂತಕ ಮತ್ತು ಬುಧ್ಧಿ ಜೀವಿ ಅನ್ನಿಸಿಕೊಂಡ ಕೆಲವರಿಂದ,
  • ಜಾತಿ ಹೆಸರಲ್ಲಿ ಜನರನ್ನ ಒಡೆದು ಓಟು ಗಿಟ್ಟಿಸಬಹುದು ಎನ್ನುವ ರಾಜಕಾರಿಣಿಗಳಿಂದ,
  • ಇದೀಗ ಪ್ರಚಾರಕ್ಕೆ ಬರುತ್ತಿರುವ ಮಾಧ್ಯಮಗಳಿಂದ.

ಏನು ಮಾಡಬಹುದು?


ಸ್ವಲ್ಪ ಯೋಚನೆ ಮಡಬೇಕು.
ನಿಷೇಧ ಮಾಡುವುದರಿಂದ ಸೇವೆ ನಿಲ್ಲುತ್ತದೆಯೇ?
ಹೌದೆಂದು ಹೇಳಲು ಬರುವುದಿಲ್ಲ..!!
ಭಕ್ತರು ಇಚ್ಛಿಸಿ ಮಾಡಹೊರಟರೆ ತಡೆಯಲು ದೇವಸ್ಥಾನದಿಂದ ಸಾಧ್ಯವೇ?
ಸರಕಾರದ ಆಜ್ನೆಗೆ ಬೆಲೆ ಇಲ್ಲದಂತೆ ಆಗುತ್ತದೆ ಅಷ್ಟೇ..!!
ಅದು ಎಲ್ಲರಿಗೂ ನಾಚಿಕೆಗೇಡಿನ ವಿಷಯವಾಗುತ್ತದೆ.
ಮತ್ತೇನು ಮಾಡಬಹುದು?
ವಿರೋಧಿಸುವವರ ಪೊಳ್ಳುವಾದವನ್ನೆಲ್ಲ ಬದಿಗಿಟ್ಟರೆ ಸರಿಯಾಗಿ ಕಾಣುವುದು ಒಂದೇ ವಾದ.
ಬ್ರಾಹ್ಮಣರು ಮಾತ್ರ ಉಂಡ ಎಲೆಯಲ್ಲೇ ಯಾಕೆ?  ಬ್ರಾಹ್ಮಣಾರು ಮಾತ್ರ ಣ್ಣುತ್ತಾರೆ ಎಂಬುದೇ ಇವರ ಮಾತಿನ ಮೂಲ ಅರ್ಥ.
ಯಾಕೆಂದರೆ, ಬೀದಿ ಮಡೆಸ್ನಾನಕ್ಕೆ ಇವರ ಆಕ್ಷೇಪ ಏನೂ ಇಲ್ಲ. ;)
ಸರಿಯಾದ ಪ್ರಷ್ಣೆ ಇದು.
ಹೌದು.

ಸಹಭೋಜನ ಮಾಡಲು ಏನಡ್ಡಿ?

ಹೇಗಿದ್ದರೂ ದೇವರನ್ನು ಹೊರುವುದೊಂದು ಬಿಟ್ಟರೆ ಬೇರಾವ ಹಕ್ಕು ಮತ್ತು ಅಭಿದಾನಗಳು ಬ್ರಾಹ್ಮಣರಿಗಿಲ್ಲ.
ಮಲೆಕುಡಿಯರನ್ನು ಸುಬ್ರಹ್ಮಣ್ಯ ದೇವರ ಪ್ರಥಮ ಶಿಷ್ಯವರ್ಗ ಎನ್ನುತ್ತಾರೆ.
ರಥಕಟ್ಟಲು, ದೀಪ ಹಿಡಿಯಲು, ಚಾಮರ ಬೀಸಲು ಬ್ರಾಹ್ಮಣಾರಿಗೆ ಅವಕಾಶವಿಲ್ಲ,
ದೇವರು ತನ್ನನ್ನು ಪ್ರಕಟಿಸಿಕೊಂಡದ್ದೂ ಆಜಾತಿಯ ಹೆಣ್ಣಿಗೇ ಎನ್ನುತ್ತದೆ ಸ್ಥಳ ಪುರಾಣ..!!
ಹಾಗದರೆ,
ಸಹಭೋಜನ ಮಾಡಿದರಾಯಿತು.
ದೇವರ ಪ್ರಸಾದ ಭೋಜನ ಎಲ್ಲರೂ ಒಟ್ಟಿಗೇ ಸ್ವೀಕರಿಸುವಂತೆ ಆಗಬೇಕು. ಆಗ,
  • ವಿರೋಧಿಸುವವರ ಬಾಯಿ ಮುಚ್ಚುತ್ತದೆ. ಅವರಿಗೂ ಉಣ್ಣಲು ಅವಕಾಶವಿದೆಯಲ್ಲ?
  • ದೇವರಿಗೂ ಈ ಎಲ್ಲ ಗಲಾಟೆ ನಿಂತದ್ದು ಖುಶಿಯಾಗಬಹುದು.
ಹೇಗೂ ಕೂತ ಎಲ್ಲರಿಗೂ, ಎಲ್ಲಾದಿನ ಹಸ್ತೋದಕ ಹಾಕುವುದಿಲ್ಲ. ಸಂತರ್ಪಣೆ ಅಲ್ಲದಾದಾಗ - ಬರೆಯ ಪ್ರಸಾದ ಭೋಜನ ಎಂದಾದರೆ ಸಹಭೋಜನವೇ ಆಗಲಿ.
ಆದರೆ ಎಂದಿನ ಕ್ರಮದಂತೆ ಆಗಲಿ, ಅದೇ ಮೊದಲಿನ ನಿಷ್ಠೆ ಮತ್ತು ಸಮರ್ಪಣಾ ಭಾವದಿಂದ ಆಗಲಿ.
ಸಹಭೋಜನವಾದರೆ ಬರುವುದಿಲ್ಲ ಎಂದು ಎಲ್ಲಿಯಾದರೂ ಬ್ರಾಹ್ಮಣರು ಸುಮ್ಮನೇ ಕುಳಿತರೆ ತೊಂದರೆ ಇಲ್ಲ.
ಕೊಂಬು ಇರುವ ಬ್ರಾಹ್ಮಣರು ಉಂಡ ಎಲೆಯಲ್ಲಿ ಉರುಳುವುದರಿಂದ,
"ಸ್ವಾಮೀ ಸುಬ್ರಹ್ಮಣ್ಯ" ಎಂದು ಭಕ್ತಿಯಿಂದ ಉಂಡ ಜನರ ಎಂಜಲೆಲೆಯ ಮೇಲೆ ಉರುಳುವುದು ಕೋಟಿ ಪಾಲು ಮೇಲು..!!
ಒಂದು ಗಂಟೆ,
ಒಂದೊಂದೇ item ನಿಧಾನವಾಗಿ ಬಡಿಸುತ್ತಾ - ಪ್ರತಿಯೊಂದೂ ೨ ಬಾರಿ ವಿಚಾರಣೆಗೆ ಬಂದರೆ, ಕಂಡು - ಕೂತು ಸುಸ್ತಾಗಿ ಬರೆಯ ಪ್ರಚಾರಕ್ಕೆ ಬಂದವರು ಮುಂದಿನ ವರ್ಷದಿಂದ ಖಂಡಿತಾ ಬರುವುದಿಲ್ಲ.
ಆನಂತರ ಭಕ್ತರು ಮಾತ್ರ ಬರುತ್ತಾರೆ.. :)

ದಿಟ್ಟತನದಿಂದ ಎದುರಿಸೋಣ..!!
ಪೊಳ್ಳು ವಾದಗಳಿಗೆ ಅವಕಾಶ ಕೊಡದೇ ಇರೋಣ..!!

ಹೊಸತನಕ್ಕೆ ತೆರೆದುಕೊಳ್ಳುವುದೇ ಮಾನವತೆ - ಎಲ್ಲ ಜಾತಿಯ ಎಲ್ಲೆಯನ್ನು ಮೀರಿದ್ದದು. 

Comments

Soumya said…
ನನಗೆ ಇದರ ಇತಿಹಾಸದ ಬಗ್ಗೆ ಸ್ವಲ್ಪವೂ ತಿಳುವಳಿಕೆ ಇಲ್ಲದಿದ್ದುದ್ದರಿಂದ ಇದು ಯಾಕೆ/ ಹೇಗೆ ಸುರುವಾಗಿದ್ದಿರ ಬಹುದು ಎಂಬ ಕುತೂಹಲ. ನಾನು ಬುದ್ಧಿ ಜೀವಿಯೂ ಅಲ್ಲ, atheist ಕೂಡಾ ಅಲ್ಲ. ಆದರೂ, logic tells me that this belief is pure nonsense...
Nanda Kishor B said…
:)
faith and logic need not go hand by hand right?
:)
mg said…
ಪರಂಪರೆಯಿಂದ ನಡೆದುಕೊಂಡು ಬಂದ ಆಚಾರ ಎಂಬ ಮಾತ್ರಕ್ಕೆ ಅದನ್ನು ಬದಲಾಯಿಸಬಾರದೆಂಬ ವಾದ ಸರಿಯಲ್ಲ. ಧಾರ್ಮಿಕ ವಿಚಾರಗಳನ್ನು scientific ಆಗಿ ನೋಡುವುದು ಸಾಧ್ಯವಿಲ್ಲದಿದ್ದರೂ ಮಾನವೀಯ ದ್ರಷ್ಟಿಯಿಂದ ನೋಡುವುದು ಅಗತ್ಯ. ಬುದ್ಧಿಜೀವಿಗಳು ತಮ್ಮ ಲಾಭಕ್ಕಾಗಿ ಇದನ್ನು ಬಳಸುತ್ತಿದ್ದಾರೆ ಎಂಬುದು ಸತ್ಯ. ಆದರೆ ಈ ಪದ್ಧತಿಯನ್ನು ಸಮರ್ಥಿಸುವುದರಲ್ಲಿ ಯಾವ ಅರ್ಥವೂ ಇಲ್ಲ ಎಂಬುದೂ ಅಷ್ಟೇ ಸತ್ಯ.
Nanda Kishor B said…
ಪರಂಪರೆಯಿಂದ ನಡೆದುಕೊಂಡು ಬಂದ ಆಚಾರ ಎಂಬ ಮಾತ್ರಕ್ಕೆ ಅದನ್ನು ಬದಲಾಯಿಸಬಾರದೆಂಬ ವಾದ ಸರಿಯಲ್ಲ ಎಂಬುದನ್ನು ನಾನೂ ಪೂರ್ಣತಃ ಒಪ್ಪುತ್ತೇನೆ. :)
ಪರಂಪರೆ ಎಂದರೇ ಹಾಗೆ, ಕಾಲದ ಅವಷ್ಯಕತೆಗೆ ತಕ್ಕಂತೆ ತನ್ನಲ್ಲಿ ಹೊಸತವನ್ನು ಕಂಡುಕೊಳ್ಳಲು ಸಾಮರ್ಥ್ಯವಿಲ್ಲದೇ ಹೋದರೆ, ಅದು ಎಂತಹಾ ಮಾಹಾನ್ ಸಂಸ್ಕೃತಿಯೇ ಆದರೂ ನಶಿಸಿಹೋಗುವುದರಲ್ಲಿ ಸಂಶಯವೇ ಇಲ್ಲ. ಬದಲಾವಣೆ ಆಗಲೇ ಬೇಕು. ಅದಿಲ್ಲವೆಂದಾದರೆ ಪರಂಪರೆ ನಿಂತು ಹೋಗುತ್ತದೆ ಅಥವಾ... ನಿಂತೇ ಹೋಗುತ್ತದೆ.

ಧಾರ್ಮಿಕ ವಿಚಾರಗಳಿಗೆ ಬಂದಾಗ,
ನಮ್ಮ ಅಚಾರ ವಿಚಾರಗಳನ್ನು ಮತ್ತು ಧರ್ಮ ಸಂಸ್ಕೃತಿಯನ್ನು - ಕೋಟ್ಯಾನುಕೋಟಿ ವರ್ಷಗಳಿಂದ ಹರಿದು ಬರುತ್ತಿರುವ ನದಿಗೆ ಹೋಲಿಸಬಹುದೇನೋ? ತನ್ನ ಉಳಿವಿಗಾಗಿ ಹಲವಾರು ಉಪನದಿಗಳೊಂದಿಗೆ ಇದು ಬೆರೆತಿದೆ, ಹಲವನ್ನು ಸ್ವಾಗತಿಸಿದೆ. ಹಾಗೇ ಹರಿಯುತ್ತಾ ತನ್ನದೇ ಆದ ಒಂದು ಹಾದಿಯನ್ನೂ ಮಾಡಿಕೊಂಡಿದೆ. ಈಗ ಅದಕ್ಕೆ ಅದರದ್ದೇ ಆದ ಒಂದು ಅಸ್ಥಿತ್ವವೂ ಉಂಟು. ಆ ಅಸ್ಥಿತ್ವದ ಜೀವನಾಡಿ ನೀವು ಹೇಳಿದ - ಮಾನವೀಯತೆ. ಅದಿಲ್ಲದೆ ಈ ನದಿ ಚಲಿಸದು.

ಮಾನವೀಯತೆಯನ್ನು ಈ ಸಂದರ್ಭಕ್ಕೆ ಹೋಲಿಸಿ ಹೇಳುವುದಾದರೆ - "ಬೇರೆಯವರು ಉಂಡ ಎಂಜಲೆಲೆಯ ಮೇಲೆ ಹೊರಳುವುದು ಮಾನವೀಯತೆ ಅಲ್ಲ" ಎಂದಾಗುತ್ತದೆ.
ಒಪ್ಪಲೇಬೇಕಾದ ಮಾತು ಅದು.
ಆದರೆ, ಒಬ್ಬ ವ್ಯಕ್ತಿ ತನ್ನದೇ ಸ್ವಂತ ಇಚ್ಛೆಯಿಂದ ಮನಃ ಶಾಂತಿಗಾಗಿ ಅದನ್ನು ಮಾಡಲು ಮುಂದಾದರೆ - ಅದಕ್ಕೆ ಯಾವುದೇ ರೀತಿ ಸಂಬಂಧ ಪಡದವರು ತಡೆಯುವುದು ಎಷ್ಟು ಸರಿ?

ಈ ಪಧ್ದತಿಯನ್ನು ನಾನು ಸಮರ್ಥಿಸುತ್ತಿರುವುದಲ್ಲ. ಅಥವಾ ಇದಕ್ಕೆ ತಡೆಹಾಕಲೇ ಬಾರದು ಎಂದು ಹೇಳುತ್ತಿರುವುದೂ ಅಲ್ಲ.
ಪ್ರತಿಯೊಂದು ಆಚರಣೆಗಳೂ ಆಯಾಯ ಕಾಲದ ಅಗತ್ಯದ ಮೇಲೆ ರೂಪುಗೊಂಡಂತಹವು.
ಹಾಗಾಗಿ ಒಂದು ಆಚರಣೇ ಬೇಡ ಎಂದು ಹೇಳುವುದಾದರೆ,
ಅದು ಶುರುವಾಗಲು - ಸಾಮಾಜಿಕ, ವಯಕ್ತಿಕ, ಮಾನಸಿಕ, ಆಧ್ಯಾತ್ಮಿಕ ಕಾರಣಗಳು ಯಾವುವು?
ಅದು ಈಗ ಎಷ್ಟು ಪ್ರಸ್ತುತ?
ಒಂದು ವೇಳೆ ಅಂತಹ ಯಾವುದಾದರೂ ಕಾರಣ ಇದ್ದಲ್ಲಿ - ಈಗಿನ ಕಾಲಕ್ಕೆ ಇದಲ್ಲದೆ (ಮಡೆಮಡೆಸ್ನಾನ) ಬೇರೆ ಯಾವರೀತಿಯ ಉತ್ತಮ ಪರಿಹಾರ ಕೊಡಬಹುದು?
ಒಂದು ವೇಳೆ ಅಂತಹ ಯಾವುದೇ ಕಾರಣ ಇಲ್ಲದೇ ಹೋದರೆ - ಈ ಪಧ್ಧತಿಯನ್ನು ಸಂಪೂರ್ಣವಾಗಿ ತೆಗೆದುಹಾಕಲು ಯಾವ ಕ್ರಮ ಕೈಗೊಳ್ಳಬಹುದು? ಎಂಬುದರ ಬಗ್ಗೆ ಅಧ್ಯಯನ ನಡೆಯಲಿ.

ಹಿಂದೆ ನಡೆದುಕೊಂಡು ಬಂದಿತ್ತು ಎನ್ನುವುದನ್ನು ಹೇಳುತ್ತಾ ಇನ್ನೂ ನಡೆಸುವುದು ತಪ್ಪು.
ಹಿಂದೆ ನಡೆಯುತ್ತಿತ್ತು ಎನ್ನುತ್ತಾ ಈಗ ಅದನ್ನು ವಿರೋಧಿಸುವುದೂ ಅಷ್ಟೇ ತಪ್ಪು.

ಅದೊಂದು ಕಗ್ಗದ ಮಾತಿಂತೆ,
ಹಳೆ ಬೇರೂ ಬೇಕು ಹೊಸ ಚಿಗುರೂ ಬೇಕು - ಧರ್ಮದೊಡನೆ ವಿಜ್ನಾನ ಬೆರೆಯಬೇಕು.
ಆಗ - ಜಸವು ಜಗ ಜೀವನಕೆ.
ಅಲ್ಲವೇ?

ಪೇಜಾವರ ಯತಿಗಳ ಅಧ್ಯಕ್ಷತೆಯಲ್ಲಿ ಸಂವಾದ ನಡೆಯಲಿದೆ ಎಂದು ನಿನ್ನೆಯ ಉದಯವಾಣಿಯಲ್ಲಿ ಪ್ರಕಟವಾಗಿದೆ.
ನೋಡೋಣ ಏನಾಗುತ್ತೆಂದು. :)

ಪ್ರತಿಕ್ರಿಯೆಗೆ ಮನಃಪೂರ್ವಕ ಧನ್ಯವಾದಗಳು :)
mg said…
ಒಬ್ಬ ವ್ಯಕ್ತಿ ತನ್ನದೇ ಸ್ವಂತ ಇಚ್ಛೆಯಿಂದ ಮನಃ ಶಾಂತಿಗಾಗಿ ಅದನ್ನು ಮಾಡಲು ಮುಂದಾದರೆ - ಅದಕ್ಕೆ ಯಾವುದೇ ರೀತಿ ಸಂಬಂಧ ಪಡದವರು ತಡೆಯುವುದು ಎಷ್ಟು ಸರಿ?
ಇದು ನಿಮ್ಮ ಪ್ರಶ್ನೆ.
ನಿಮ್ಮ ವಾದವನ್ನು ನಾನು ಪೂರ್ಣವಾಗಿ ತಳ್ಳಿಹಾಕುವುದಿಲ್ಲ.
ಖಂಡಿತವಾಗಿಯೂ ವ್ಯಕ್ತಿ ಸ್ವಾತಂತ್ರ್ಯವನ್ನು ಕಸಿದುಕೊಳ್ಳುವುದು ತಪ್ಪು. ಆದರೆ ಆತನ/ಆಕೆಯ ಆಚರಣೆಗಳು ನಾಗರಿಕ ಸಮಾಜ ಒಪ್ಪುವಂತಿರಬೇಕು.ಇಲ್ಲವಾದಲ್ಲಿ ಅದನ್ನು ಸಮರ್ಥಿಸಿಕೊಳ್ಳುವುದು ಕಷ್ಟವಾಗುತ್ತದೆ. ಇನ್ನು ಸಮಾಜ ’ಅನಾಗರಿಕ’ ಎಂದು ಗುರುತಿಸಿದ ಆಚರಣೆಯ ನಿಷೇಧಕ್ಕೂ ಮೊದಲು ಅದರ ಮೂಲವನ್ನು ಹುಡುಕುವ ಅಗತ್ಯತೆ ಇಲ್ಲ ಎಂಬುದು ನನ್ನ ಭಾವನೆ. ಯಾವ ಕಾಲದಲ್ಲಿ ಮತ್ತು ಯಾವ ಕಾರಣಕ್ಕೆ ಇದು ಆಚರಣೆಗೆ ಬಂತು ಎಂಬುದಕ್ಕಿಂತ ಈ ಪದ್ಧತಿ ಇಂದಿನ ದಿನಕ್ಕೆ ಪ್ರಸ್ತುತವೇ? ಎಂಬುದು ಮುಖ್ಯವಾಗುತ್ತದೆ.
ಶ್ರೀಗಳ ಮುಖಂಡತ್ವದಲ್ಲಿನ ಸಂವಾದ ಕಾರ್ಯಕ್ರಮ ಮುಂದೂಡಲಾಗಿದೆ ಎಂದು ಪತ್ರಿಕೆಯಲ್ಲಿ ಓದಿದೆ. ಆದುದರಿಂದ ಇದರ ಬಗೆಗಿನ ಅರ್ಥಪೂರ್ಣ ಚರ್ಚೆಗೆ ನಾವು ಇನ್ನೂ ಕೆಲವು ಸಮಯ ಕಾಯಬೇಕಿದೆ.
Nanda Kishor B said…
ಯಾವುದು ನಾಗರಿಕ ಜೀವನದ ಸಹಜ ಪ್ರವಾಹಕ್ಕೆ ತಡೆ ಹಾಕುತ್ತದೋ ಅದನ್ನೇ ಅಲ್ಲವೇ ಅನಾಗರಿಕ ಎನ್ನುವುದು?
ಸಾಮಾಜಿಕ ಸ್ವಾಸ್ಥ್ಯ ಕೆಡಿಸುವಂತಹ - ಕುಡಿತ, ಜೂಜು, ತಂಬಾಕು ಯುಕ್ತ ಆಹಾರ ಸೇವನೆಗಳಿಂದ ಹಿಡಿದು, ಪ್ರಾಣಿಬಲಿ, ನರಭಕ್ಷಣೆ, ನರಬಲಿ, ಸಹಗಮನದವರೆಗೆ ಯಾವುದು ಸಾಮಾಜಿಕ ನೀತಿ ನಿಯಮಗಳಿಗೆ ವಿರುದ್ಧವಾಗಿದೆಯೋ ಅವೆಲ್ಲವೂ 'ಅನಾಗರಿಕತೆ'ಯ ಪಟ್ಟಿಯಲ್ಲೇ ಬರುತ್ತವೆ.
ಇಂತಹ ವಿಚಾರಗಳ ನಿಷೇಧಕ್ಕೆ ನನ್ನ ಬೆಂಬಲ ಯಾವತ್ತೂ ಇದೆ.
ಒಂದುವೇಳೆ ಮಡೆಸ್ನಾನವೂ ಇದೇ ಪಟ್ಟಿಯಲ್ಲಿ ಬರುವಂತಿದ್ದರೆ ಅದೂ ಸರಿಯೆ. :)
ಆದರೆ,
"ಆದರೆ ಆತನ/ಆಕೆಯ ಆಚರಣೆಗಳು ನಾಗರಿಕ ಸಮಾಜ ಒಪ್ಪುವಂತಿರಬೇಕು." ಅಂತ ನೀವು ಹೇಳಿದಿರಿ, ಇಲ್ಲಿ ನಾಗರಿಕ ಸಮಾಜ ಎಂದರೆ ಯಾರು?
ಎಲ್ಲಿ ಮಡೆಸ್ನಾನ ನಡೆಯುತ್ತದೋ ಅಲ್ಲಿನ ವಾಸಿಗಳೋ, ಇದರಲ್ಲಿ ಭಾಗವಹಿಸುವವರು ಮತ್ತು ಅವರ ಕುಟುಂಬಸ್ಥರೋ, ನಿಷೇಧ ಬೇಡ ಎಂದು ಹೇಳುತ್ತಿರುವ ಸುತ್ತಲ ಹತ್ತೂರ ಜನತೆಯೋ - ಅಥವಾ - ವಿಷಯದ ತಲೆಬುಡ ಗೊತ್ತಿಲ್ಲದೆ, ಅಧ್ಯಯನ ಮಾಡುವ ಯಾವುದೇ ಆಸಕ್ತಿಯೂ ಇಲ್ಲದೇ ಬರೆಯ ಪ್ರಚಾರಕ್ಕಾಗಿ ಬೊಬ್ಬೆಹಾಕುವ ಬುದ್ಧಿ ಜೀವಿಗಳೋ?

ಇಲ್ಲಿ ನಿಜವಾದ ವಿರೋಧ ಯಾವುದಕ್ಕೆ ಅಂತಲೂ ನೋಡಬೇಕು - ಉರುಳುಸೇವೆಗೋ? ಎಂಜಲೆಲೆಯ ಮೇಲೆ ಉರುಳುವುದಕ್ಕೋ? ಅಥವಾ ಅಲ್ಲಿ ಊಟಮಾಡುವುದು ಬ್ರಾಹ್ಮಣ ಜಾತಿಯಲ್ಲಿ ಹುಟ್ಟಿದವರು ಮಾತ್ರ ಎಂಬ ಕಾರಣಕ್ಕೋ? ;)

{ಯಾವ ಕಾಲದಲ್ಲಿ ಮತ್ತು ಯಾವ ಕಾರಣಕ್ಕೆ ಇದು ಆಚರಣೆಗೆ ಬಂತು ಎಂಬುದಕ್ಕಿಂತ ಈ ಪದ್ಧತಿ ಇಂದಿನ ದಿನಕ್ಕೆ ಪ್ರಸ್ತುತವೇ? ಎಂಬುದು ಮುಖ್ಯವಾಗುತ್ತದೆ.} - ನನ್ನ ಪ್ರಶ್ನೆಗಳ ಪಟ್ಟಿಯಲ್ಲಿ ಅದರ ಈಗಿನ ಪ್ರಸ್ತುತತೆಯೂ ಸೇರಿದೆ :)
ಸಂವಾದ ಮುಂದೂಡಲ್ಪಟ್ಟದ್ದು ಗೊತ್ತಿರಲಿಲ್ಲ. ನೋಡೋಣ, ಒಂದಲ್ಲ ಒಂದು ದಿನ ಸಂವಾದ ನಡೆದೇ ನಡೆಯುತ್ತದೆ. ಆಗ ಈ ಬಿಗಿ ಸಡಿಲಾಗಬಹುದು. :)

ತಿಳಿದ ಊರಿನ ಮುಖಂಡರು ಮತ್ತು ಆಸಕ್ತರು ಸೇರಿ ಸಮರ್ಪಕವಾದ ಅಧ್ಯಯನ ಆಗಲಿ.
ಅದರಲ್ಲಿ ನಿಷೇಧವೆಂದು ತೀರ್ಮಾನವಾದರೆ - ನಿಷೇಧವೇ ಮತ್ತೆ. ಪ್ರಶ್ನೆ ಇಲ್ಲ...! :)
anaamika mathu said…
yes I am completely agreeing with your opinion. this ritual is 100% personal activity of individuals and performed by oneself own will
anaamika mathu said…
yes I am completely agree with your opinion because this ritual is performed by one self own will not forced by any body or institution's
hence let it be in present situation and need not do any controversy