ಸೀತಾ ರಾಮಂ ಚಲನಚಿತ್ರದ ವಿಶ್ಲೇಷಣೆ

#SitaRamamReview with Soumya MJ
ಒಂದು ಒಳ್ಳೆಯ ಸಿನಿಮಾ ಹೇಗಿರಬೇಕು ಎಂಬುದಕ್ಕೆ ತೆಲುಗಿನ ಸೀತಾರಾಮಮ್ ಉತ್ತರವಾಗಿದೆ. ನಾನು ವೀಕ್ಷಿಸಿದ್ದು ಈ ಚಲನಚಿತ್ರದ ಮಲಯಾಳಂ ಅವತರಣಿಕೆ. ಪ್ರತಿಭಾವಂತ ಹಾಗೂ ಹೆಸರಾಂತ ಕಲಾವಿದರಾದ ದಿಲ್ಕುರ್ ಸಲ್ಮಾನ್ ನಾಯಕನಟನಾಗಿ ಅಭಿನಯಿಸಿರುವ ಈ ಚಿತ್ರಕ್ಕೆ ಮೃಣಾಲ್ ಠಾಕುರ್ ನಾಯಕಿ. ಪೋಷಕಪಾತ್ರಗಳಲ್ಲಿ ಚಿತ್ರಕ್ಕೆ ಜೀವವಿತ್ತವರು ಸುಮಂತ್, ವೆನ್ನೆಲ ಕಿಶೋರ್, ಸಚಿನ್ ಖೇಡೇಕರ್, ಪ್ರಕಾಶ್ ರಾಜ್ ಮುಂತಾದವರು. ಇಡಿಯ ಚಿತ್ರದ ನಿರೂಪಣೆ ಹಾಗೂ ಗತಿನಿರ್ಣಯದ ಎರಡುಪಾತ್ರಗಳನ್ನು ಯಶಸ್ವಿಯಾಗಿ ನಿರ್ವಹಿಸಿದವರು ರಶ್ಮಿಕಾ ಮಂದಣ್ಣ ಹಾಗೂ ತರುಣ್ ಭಾಸ್ಕರ್.

ಕಥೆ 1984ರದ್ದು; ಹೂರಣ 1964ರದ್ದು. ಇಪ್ಪತ್ತು ವರ್ಷಗಳ ಹಿಂದೆ ರಾಮ ಎನ್ನುವವನೊಬ್ಬ ತನ್ನ ಪತ್ನಿ ಸೀತಾಮಹಾಲಕ್ಷ್ಮಿಗೆ ಬರೆದ ಒಂದು ಪತ್ರವನ್ನು ತಲುಪಿಸವ ಇರಾದೆಯಿಂದ ಭಾರತಕ್ಕೆ ಬಂದ ಕಟ್ಟರ್ ಮುಸ್ಲಿಂ ಹುಡುಗಿಯೊಬ್ಬಳು ಭಾರತದ ಅಂತಃಸತ್ವವಾದ ಸೀತಾರಾಮರ ಆದರ್ಶಗಳನ್ನು ಅರಿತುಕೊಂಡು ಮನಃಪರಿವರ್ತನೆಯನ್ನು ಹೊಂದುವುದೇ ಈ ಚಿತ್ರದ ಕಥೆ. ಆಕೆಯ ಈ ಯಾತ್ರೆಯೇ ಈ ಸಿನಿಮಾ. ಒಂದರ ಹಿಂದೆ ಒಂದರಂತೆ 1984 ಮತ್ತು 1964ರ ಕಾಲಘಟ್ಟದ ಫಟನಾವಳಿಗಳನ್ನು ಪೋಣಿಸಿಕೊಂಡು ಹೋಗುವ ಈ ಸಿನಿಮಾ ಒಟ್ಟು ಎರಡೂವರೆ ಗಂಟೆಗಳದ್ದು. ಆದರೆ, ಒಂದಿನಿತೂ ಬೇಸರ ಮತ್ತು ಔದಾಸೀನ್ಯ ತರಿಸದೆ, ಒಬ್ಬ ಧೈರ್ಯಸ್ಥೆ ನಾಯಕಿಯ, ಒಬ್ಬ ದೇಶದ್ರೋಹಿಯ, ಶತ್ರುರಾಷ್ಟ್ರದ ಒಬ್ಬನೇ ಸಹೃದಯಿ ಮನುಷ್ಯನ, ತಲೆಹಾಳು ಮಾಡಿಕೊಂಡ ಆತಂಕವಾದಿಗಳ, ಆತಂಕವಾದಿಗಳ ಮಾತಿಗೆ ಮರುಳಾದ ಕಾಶ್ಮೀರದ ಮುಸಲ್ಮಾನರ, ಅಂತೆಯೇ - ಇವೆಲ್ಲವನ್ನೂ ಮೀರಿನಿಂತ ಸೈನಿಕ ರಾಮನ ಪಾತ್ರಗಳು - ಒಂದೊಂದು ಪಾತ್ರಗಳೂ ಒಂದೊಂದು ಸಿನಿಮಾ ಮಾಡುವಷ್ಟು ಗಟ್ಟಿ ಹಾಗೂ  ಸತ್ವಯುತವಾದವುಗಳು. ನಾಯಕಿ ಸೀತಾಮಹಾಲಕ್ಷ್ಮಿಯ ಪಾತ್ರವಂತೂ ಇಡಿಯ ಸಿನಿಮಾವನ್ನು ಒಟ್ಟಾಗಿ ಕಟ್ಟಿ ಹಿಡಿದಿಡುತ್ತದೆ. ಎಲ್ಲ ನಟರ ಅಭಿನಯವೂ ಮನೋಜ್ಞವಾಗಿ ಮೂಡಿಬಂದಿದೆ, ಎಲ್ಲ ಪಾತ್ರಗಳಿಗೂ ನ್ಯಾಯ ಸಿಕ್ಕಿದೆ.

ಈ ಸಿನೆಮಾದ್ಲಲಿ ವಿಶಾಲ್ ಚಂದ್ರಶೇಖರ್ ಅವರ ಮಧುರವಾದ ಹಿನ್ನೆಲೆ ಸಂಗೀತವಿದೆ, ಸುಶ್ರಾವ್ಯ ಹಾಡುಗಳಿವೆ, Screenplay-presentation ಅತ್ಯುತ್ತಮವಾಗಿದೆ, ಹನು ರಾಘವಪುಡಿ ಹಾಗೂ ರಾಜ್ಕುಮಾರ್ ಕಂಡಮುಡಿಯವರು ಬರೆದ ಈ ಕಥೆಯನ್ನು ಅವರುಗಳೇ ಜಯ್ ಕೃಷ್ಣ ಅನ್ನುವವರ ಜೊತೆ ಸೇರಿ ಅತ್ಯಂತ ಆಸ್ಥೆಯಿಂದ ನಿರ್ದೇಶಿಸಿದ್ದಾರೆ, ಅಷ್ಟೇ ಕುಶಲತೆಯಿಂದ ಇದನ್ನು cameraದ ಕಣ್ಣಿನಲ್ಲಿ ಸೆರೆ ಹಿಡಿದವರು ಪಿ ಎಸ್ ವಿನೋದ್ ಮತ್ತು ಶ್ರೇಯಸ್ ಕೃಷ್ಣ. ಇದರ ನಿರ್ಮಾಣ ವೈಜಯಂತಿ ಮೂವೀಸ್ ಮತ್ತು ಸ್ವಪ್ನ ಸಿನಿಮಾ ಅವರದ್ದು.
ಎರಡನೇಬಾರಿ ನೋಡಿದರೆ ಈ ಚಿತ್ರವನ್ನು ಮತ್ತೆ ಮತ್ತೆ ನೋಡುವ ಚಟ ಆಗಬಹುದೇನೋ ಎನ್ನಿಸುವಷ್ಟರ ಮಟ್ಟಿಗೆ ಚಿತ್ರ ಚೆನ್ನಾಗಿದೆ.

ರಾಮನೆಂದರೆ ಕರುಣೆ, ರಾಮನೆಂದರೆ ತ್ಯಾಗ, ರಾಮನೆಂದರೆ ಸತ್ಯ, ರಾಮನೆಂದರೆ ಪೌರುಷ, ರಾಮನೆಂದರೆ ರಸಿಕ, ರಾಮನೊಬ್ಬ ಪ್ರೇಮಿ - ನವರಸನಾಯಕನಾದ ರಾಮನು ಈ ಜಗದ ಪುರುಷೋತ್ತಮ!

ಈ ಚಿತ್ರದ ಮುಖ್ಯ ತಿರುವಿನಲ್ಲಿನ ಒಂದು ಘಟನೆ ಹೀಗಿದೆ:
"ಅದೇಕೆ ಆಕೆ ಮುಸಲ್ಮಾನಳಾಗಿದ್ದುಕೊಂಡು ಹಿಂದೂ ಒಬ್ಬನನ್ನು ಪ್ರೇಮಿಸಿದಳು!!?" ಎಂಬ ನಿರೂಪಕಿಯ ಪ್ರಶ್ನೆಗೆ, "ಯಾಕೆಂದರೆ ಆತ ರಾಮ" ಎಂಬುದು ಎದುರಿನಿಂದ ಉತ್ತರವಾಗಿ ಬರುತ್ತದೆ.
ತಕ್ಷಣವೇ 1984ರಿಂದ 1964ಕ್ಕೆ ಜಾರುತ್ತದೆ ಕಾಲ -
ನಾಯಕಿಯೊಂದಿಗೆ ಮದುವೆಯ ಪ್ರಸ್ತಾಪವನ್ನು ಇಡುತ್ತಾನೆ ನಾಯಕ. "ನಾನೊಬ್ಬ ಸೈನಿಕ. ತಿಂಗಳಿಗೆ ಆರುನೂರು ರೂಪಾಯಿ ಸಂಬಳ, ಬ್ಯಾಂಕಿನಲ್ಲೂ ಒಂದೂವರೆ ಎರಡುಸಾವಿರ ರೂಪಾಯಿ ಇದೆ, ಹಾಗಾಗಿ ಜೀವನಕ್ಕೇನೂ ತೊಂದರೆ ಆಗದು, ನಿನಗಾಗಿ ಒಂದು ಮನೆಯನ್ನೂ ಖರೀದಿಸಬಲ್ಲೆ. ನಿನ್ನನ್ನು ರಾಜಕುಮಾರಿಯಂತೆ ನೋಡಿಕೊಳ್ಳುತ್ತೇನೆ." ಎಂದು ಭವಿಷ್ಯದ ಸುಂದರ ಬದುಕಿನ ಬಗ್ಗೆ ವಾಗ್ದಾನವನ್ನೂ ಮಾಡಿದ್ದ. ಈ ಚಿತ್ರದಲ್ಲಿ ನಾಯಕ ಹುಟ್ಟುಅನಾಥ. ಆದರೆ, ತನ್ನನ್ನು ಪತ್ರಗಳಲ್ಲಿ 'ಅಣ್ಣ'ನೆಂದು ಸಂಬೋಧಿಸುತ್ತಿದ್ದವಳನ್ನು ಕಾಣಬೇಕು, ಆಕೆಯ ಪರಿಚಯ ನಾಯಕಿಗೆ ಮಾಡಿಸಬೇಕು ಎಂದು ಅಂದುಕೊಂಡು ಆಕೆಯ ಬಳಿಗೆ ಹೋದ ನಾಯಕನಿಗೆ, ಆಕೆಯಂತೆಯೇ ಹಲವಾರು ಹೆಣ್ಣು ಮಕ್ಕಳು ಜೀವನದ ಕಷ್ಟಗಳೆದುರು ಸೋತು ಸೂಳೆಯರಾಗಿ ಬದುಕುತ್ತಿರುವ ವಿಚಾರ ತಿಳಿದು ಆಘಾತವಾಗುತ್ತದೆ. ಒಂದು ಚೂರೂ ಆಲೋಚನೆ ಮಾಡದೇ ಆ ಕ್ಷಣಕ್ಕೇ ತನ್ನಲ್ಲಿದ್ದ ದುಡ್ಡೆಲ್ಲವನ್ನೂ ಕೊಟ್ಟು ಅವರೆಲ್ಲರನ್ನೂ ಅಲ್ಲಿಂದ ಕರೆದುಕೊಂಡು ಹೋಗುತ್ತಾನೆ. ಆ ಎಲ್ಲ ಹೆಣ್ಣುಮಕ್ಕಳನ್ನು ಸುರಕ್ಷಿತವಾಗಿ ಬಿಡಿಸಿದ ನಾಯಕನು ತನ್ನ  ಪತ್ನಿಯಾಗಲಿರುವವಳಲ್ಲಿ "ನಿನಗೆ ಬಾಡಿಗೆ ಮನೆ ಆಗಬಹುದಾ?, ನನ್ನಲ್ಲೀಗ ‌ಮನೆಕೊಳ್ಳುವಷ್ಟು ಹಣವಿಲ್ಲ" ಎನ್ನುವಾಗ ಪರಹಿತಕ್ಕಾಗಿ ತನ್ನದೆಲ್ಲವನ್ನೂ ಸಮರ್ಪಿಸಿದ ಶ್ರೀರಾಮನ ಆವರ್ಶ ವೀಕ್ಷಕರ ಹೃದಯಗಳಲ್ಲಿ ನವಿರಾಗಿ ಸ್ಥಾಪನೆಗೊಳ್ಳುತ್ತೆದೆ. ಕೂಡಲೇ, "ನಾಳೆ ನಾನು ಕಾಶ್ಮೀರದಲ್ಲಿ ಕರ್ತವ್ಯ ನಿರ್ವಹಿಸಲು ವಾಪಸ್ ಹೋಗಬೇಕಿದೆ" ಎಂದು ನಾಯಕನು ಹೇಳುವಾಗ, "ಇವರ ಚಿಂತೆ ನಿಮಗೆ ಬೇಡ, ಇವರೆಲ್ಲರನ್ನೂ ಇಂದಿನಿಂದ ನಾನು ನೋಡಿಕೊಳ್ಳುತ್ತೇನೆ" ಎಂದು ಪ್ರತಿನುಡಿಯುತ್ತಾಳೆ ನಾಯಕಿ.ಇಡೀ ಸಿನೆಮಾ ನಿಂತಿರುವುದು ನಾಯಕ ರಾಮನ ಕರುಣೆ-ತ್ಯಾಗ-ಪ್ರೀತಿ-ಶೌರ್ಯದ ಮೇಲೆ. ರಾಮನ ಪಾತ್ರಕ್ಕೆ ಬಲ ತುಂಬಿರುವುದು ಧೈರ್ಯಸ್ಥೆ, ಶ್ರೀಮಂತೆ ನಾಯಕಿ ಸೀತಾಮಹಾಲಕ್ಷ್ಮಿ. ಎಲ್ಲೂ ಅಬ್ಬರವಿಲ್ಲ. ಆಡಂಬರವಿಲ್ಲ. ವ್ಯಗ್ರತೆ ಇಲ್ಲ. ಅಶ್ಲೀಲತೆ ಇಲ್ಲ. ಭೀಭತ್ಸವಿಲ್ಲ. ಅಲ್ಲಲ್ಲಿ ಅಲ್ಲಲ್ಲಿ, ಹೃದಯ ವೈಶಾಲ್ಯತೆಯಿಂದ ಕಣ್ಣೀರು ಬಂದರೆ ಅದೇ ಸಹಜ. ಸೈನಿಕರ ತ್ಯಾಗ ಬಲಿದಾನಗಳನ್ನು ಹಿನ್ನೆಲೆಯಲ್ಲಿ ಇಟ್ಟುಕೊಂಡ ಈ ಚಲನಚಿತ್ರವು ಮುಗಿಯುವ ಹೊತ್ತಿಗೆ, ರಶ್ಮಿಕಾ ಮಂದಣ್ಣರು ನಿರ್ವಹಿಸಿದ ಮತಾಂಧೆ ಆಫ್ರೀ಼ನ್ ಎಂಬ ಪಾತ್ರದ ಜೊತೆಗೆ ನಿಮ್ಮಲ್ಲೂ ಬದಲಾವಣೆಯ ಬೀಜವನ್ನು ಬಿತ್ತಿರುತ್ತದೆ.

"ಕುರುಕ್ಷೇತ್ರದ ಯುದ್ಧಭೂಮಿಯಲ್ಲಿ ರಾವಣಸಂಹಾರ; ಅಲ್ಲೇ ಸೀತಾಸ್ವಯಂವರ" ಹೇಗೆಂದು ಗೊತ್ತಾಗಲು #SitaRamam ಚಿತ್ರವನ್ನು ವೀಕ್ಷಿಸಿ.
ಕುಟುಂಬ ಸಮೇತ ನೋಡಲು ಆಗುವ ಈ ಚಲನಚಿತ್ರವನ್ನು ಕಲಾಪ್ರೇಮಿಗಳು ನೋಡಲೇಬೇಕು.

Comments