Adi Shankaracharya
ಆದಿ ಶಂಕರಾಚಾರ್ಯರು |
ಸಣ್ಣವಯಸ್ಸಿನಲ್ಲೇ ಕ್ರಾಂತಿಕಾರಕಚಿಂತನೆಯ ಮನೋಭಾವ ಬಾಲ ಶಂಕರರಲ್ಲಿ ಜಾಗೃತವಾಗಿದ್ದದ್ದನ್ನು ಅವರ ಬಗೆಗಿನ ಕತೆಗಳಲ್ಲಿ ಕಾಣುತ್ತೇವೆ. ಬ್ರಾಹ್ಮಣವಟುಗಳಲ್ಲಿ ಅಂದಿನ ದಿನಗಳಲ್ಲಿದ್ದ ಬಿಕ್ಷಾಧರ್ಮದ ಪ್ರಕಾರ ಇವರು ಮನೆ ಮನೆಗೆ ಹೋಗಿ “ಭವತಿ ಬಿಕ್ಷಾಂದೇಹಿ, ಭವಾನ್ ಬಿಕ್ಷಾಂದೇಹಿ" ಎನ್ನುವಾಗ ಒಬ್ಬ ಶ್ರೀಮಂತ ಧಾರಾಳವಾಗಿ ಕರೆದು ಎಲ್ಲರಿಗೂ ಹಂಚುತ್ತಿದ್ದ. ಆದರೆ ಬಾಲ ಶಂಕರರು ಆತನಲ್ಲಿ ಭಿಕ್ಷೆ ಪಡೆಯುವುದಕ್ಕೆ ಹತ್ತಿರ ಬರದೆ ದೂರದಿಂದ ನೋಡುತ್ತಿದ್ದರು. “ಬಾಪ್ಪಾ ಸ್ವೀಕರಿಸು ಬಾ” ಎಂದಾಗ, “ನೀನು ಅವಶ್ಯಕತೆಗಿಂತ ಹೆಚ್ಚು ಸಂಪತ್ತನ್ನು ಕೂಡಿಟ್ಟುಕೊಂಡಿದ್ದೀಯೆ, ನಾನು ನಿನ್ನ ಬಳಿ ಭಿಕ್ಷೆ ಸ್ವೀಕರಿಸಲು ನಿರಾಕರಿಸುತ್ತೇನೆ” ಎಂದು ಹೇಳಿದ ಅವರ ಚಿಂತನೆ ನಮ್ಮ ಮನಸ್ಸನ್ನು ಅತೀವವಾಗಿ ಸೆರೆಹಿಡಿದಿಡುತ್ತದೆ.
ನಮ್ಮಲ್ಲಿರುವ ಆತ್ಮವೇ ದೇವರಾಗಿರುವಾಗ ಎದುರಿಗೆ ಬಂದ ಚಾಂಡಾಲನನ್ನು ಕಂಡು ಮೈಲಿಗೆಯಾಗುತ್ತದೆ ಅತ್ತ ಸರಿ ಎಂದ ಅವರಿಗೆ ಕ್ಷಣದಲ್ಲೇ ತಪ್ಪಿನ ಅರಿವಾಗಿ ಆತನ ಕಾಲಿಗೆರಗಿ ಆತನೊಳಗೂ ಇರುವ ಶಿವಸ್ವರೂಪಿ ಭಗವಂತನನ್ನು ಕಾಣುವ ಶಂಕರರ ಆಧ್ಯಾತ್ಮದ ಅದ್ವೈತದ ಭಾವ ನಮ್ಮನ್ನು ಅತೀವವಾಗಿ ಮನಸೆಳೆಯುತ್ತವೆ.
“ಭಜಗೋವಿಂದಂ, ಭಜಗೋವಿಂದಂ, ಗೋವಿಂದಂ ಭಜಮೂಢಮತೆ, ಸಂಪ್ರಾಪ್ತೇ ಸನ್ನಿಹಿತೇ ಕಾಲೇ ನಹಿ ನಹಿ ರಕ್ಷತಿ ಢುಕ್ರಿಞ ಕರಣೇ” – ಈ ಗೀತೆಯಂತೂ ನಾವು ಬದುಕುವ ರೀತಿಗೂ ನಮ್ಮ ಬದುಕಿನ ಮೂಲ ಪ್ರೇರಣೆಗಳಿಗೂ ಇರುವ ಅಜಗಜಾಂತರವನ್ನು ಸಾರ್ವಕಾಲಿಕವಾಗಿ ಕನ್ನಡಿಯಂತೆ ತೋರುವ ದಿವ್ಯದರ್ಶನವಾಗಿ ಕಣ್ಣೆದುರು ನಿಲ್ಲುತ್ತದೆ. ಈ ಸಾಲುಗಳನ್ನು ಶ್ರೀ ಶಂಕರರು ಒಂದು ಹಳ್ಳಿಯಲ್ಲಿ ಹಾದು ಹೋಗುತ್ತಾ ಓರ್ವ ವೃದ್ಧನು ವ್ಯಾಕರಣ ಸೂತ್ರ ಬಾಯಿಂದ ಪಾಠ ಮಾಡುವುದನ್ನು ಕಂಡು ಅವನ ಮೇಲೆ ಕನಿಕರಿಸಿ ಬರೆದರಂತೆ. ಸಾಯುವ ಹೊತ್ತಿನಲ್ಲಿ ಈ ಮುದುಕ ವ್ಯಾಕರಣ ಸೂತ್ರ ಬಡಬಡಿಸುವುದನ್ನು ಕಂಡು ಅವರಿಗೆ ಕರುಣೆಯುಂಟಾಯಿತು. ಬಾಳೆಲ್ಲಾ ಕಳೆದು ಆಗಿದೆ. ಈಗ ಕಡೆಯ ಕ್ಷಣವನ್ನೂ ಸಹಾ ಈತ ಕಳೆದುಕೊಳ್ಳುತ್ತಿರುವನು. ಪರಮಾತ್ಮನನ್ನು ಸ್ಮರಿಸದೆ ಜೀವನವೆಲ್ಲಾ ಗತಿಸಿತು. ಇನ್ನೂ ಇವನು ವ್ಯಾಕರಣ ಸೂತ್ರವನ್ನು ಬಿಡುತ್ತಿಲ್ಲ. ಒಟಗುಟ್ಟುತ್ತಿರುವನು. ಈ ಸೂತ್ರಗಳಿಂದೇನು ಆಗಬೇಕಾಗಿದೆ? ಹೀಗೆ ಸುಂದರವಾಗಿ ಸಾಗುತ್ತದೆ ಶಂಕರರ ಬದುಕಿನ ಸೌಂದರ್ಯ ದೃಷ್ಟಿ. ಈ ಕುರಿತ ಹಲವು ಸಂಗೀತ ರೂಪಕಗಳು, ವ್ಯಾಖ್ಯಾನಗಳು ನಿರಂತರವಾಗಿ ಹರಿದುಬಂದಿವೆ. ಓಶೋ ಅವರ ಈ ಕುರಿತ ವ್ಯಾಖ್ಯಾನ ಅತ್ಯಂತ ಮನೋಜ್ಞವಾಗಿದೆ.
ಸನಾತನ ಭಾರತದ ಸಂಸ್ಕೃತಿಯನ್ನು ಜಗತ್ತಿಗೆ ಸಾರಿ ಹೇಳಿದ ಆಚಾರ್ಯತ್ರಯರಲ್ಲಿ ಶಂಕರಾಚಾರ್ಯರು ಮೊದಲಿಗರು. ಹೀಗಾಗಿ ಅವರು ಆದಿ ಶಂಕರರು. ಕೇವಲ 32 ವರ್ಷಗಳ ಕಾಲ ಜೀವಿಸಿದ್ದರು ಎಂದು ನಂಬಲಾಗಿರುವ ಶಂಕರಾಚಾರ್ಯರು ಈ ಅಲ್ಪಾವಧಿಯಲ್ಲಿಯೇ ದೇಶದ ಮೂಲೆ ಮೂಲೆಗಳಿಗೆ ಸಂಚರಿಸಿ ಗೀತಾಚಾರ್ಯ ಶ್ರೀಕೃಷ್ಣನ ಸಿದ್ಧಾಂತವಾದ "ಅದ್ವೈತ" ತತ್ವವನ್ನು ಪ್ರತಿಪಾದಿಸುತ್ತ ಜಗತ್ತಿಗೆ ಸಾರಿ, ಹಲವಾರು ಮತಗಳಿಂದ ದಾಳಿಗೊಳಗಾಗುತ್ತಿದ್ದ ಸನಾತನ ಹಿಂದೂ ಧರ್ಮವನ್ನು ಪುನರುತ್ಥಾನಗೊಳಿಸಿದರು. ಶೈವ, ವೈಷ್ಣವ, ಶಾಕ್ತ, ಗಾಣಪತ್ಯ, ಸೌರ ಹಾಗು ಸ್ಕಾಂದ ಮತಗಳನ್ನು ಒಗ್ಗೂಡಿಸಿ, ಷಣ್ಮತ ಪ್ರತಿಷ್ಠಾಪಕರಾದರು. ಆದಿಶಂಕರರು ಭಗವದ್-ಗೀತೆ, ಉಪನಿಶತ್ ಹಾಗು ಬ್ರಹ್ಮ ಸೂತ್ರಗಳಿಗೆ ಭಾಷ್ಯ ಬರೆದ ಮೊದಲ ಅಚಾರ್ಯರಾದರು.
ಶಂಕರರು ಬಾಲ್ಯದಲ್ಲೇ ತಂದೆಯನ್ನು ಕಳೆದುಕೊಂಡರು. ಆಧ್ಯಾತ್ಮಿಕತೆಯಲ್ಲಿ ಆಸಕ್ತಿತಳೆದ ಇವರು ಸನ್ಯಾಸತ್ವವನ್ನು ಸ್ವೀಕರಿಸುವತ್ತ ಒಲವು ತೋರಿದರು. ಆದರೆ ಒಬ್ಬನೇ ಮಗನಾಗಿದ್ದ ಶಂಕರರನ್ನು ಸನ್ಯಾಸಿಯಾಗಿ ನೋಡಲು ತಾಯಿಗೆ ಮನಸ್ಸಿರಲಿಲ್ಲ. ಹಾಗಾಗಿ ತಾಯಿಯ ಮನವೊಲಿಸಲು ಶಂಕರರು ಬಹಳ ಕಷ್ಟಪಡಬೇಕಾಯಿತು. ಆಕೆಯ ಅಂತಿಮ ಕ್ಷಣಗಳಲ್ಲಿ ತಾನು ಎಲ್ಲಿದ್ದರೂ ಆಕೆಯ ಎದುರು ಬಂದು ನಿಲ್ಲುವುದಾಗಿ ಮಾತು ಕೊಟ್ಟ ಶಂಕರರು ಸೂಕ್ತ ಗುರುವಿಗಾಗಿ ಹುಡುಕುತ್ತಾ ತಮ್ಮ ಪಯಣವನ್ನಾರಂಭಿಸಿದರು. ನರ್ಮದಾ ನದಿ ತೀರದಲ್ಲಿ ಗೋವಿಂದ ಭಗವತ್ಪಾದರನ್ನು ಭೇಟಿಯಾದ ಶಂಕರರು ಅವರನ್ನು ತನ್ನ ಗುರುಗಳನ್ನಾಗಿ ಸ್ವೀಕರಿಸಿದರು. ಅವರಿಂದ ಯೋಗ, ವೇದ, ಉಪನಿಷತ್, ವೇದಾಂತಗಳನ್ನು ಅಭ್ಯಯಿಸಿದ ನಂತರ ಕಾಶಿಗೆ ತೆರಳಿ ಅಲ್ಲಿ ಕೆಲವರನ್ನು ತಮ್ಮ ಶಿಷ್ಯರನ್ನಾಗಿಸಿಕೊಂಡು ಅವರಿಗೂ ವೇದಾಂತದ ಪಾಠ ಹೇಳಿಕೊಟ್ಟರು.
ಶಂಕರರಿಗೆ ತಮ್ಮ ಚಿಂತನೆಯಲ್ಲಿ ಸ್ಪಷ್ಟತೆ ಇತ್ತು. ದೇಶದ ಮೂಲೆ ಮೂಲೆಗಳಲ್ಲಿ ಸಂಚರಿಸಿದ ಶಂಕರರ ವ್ಯಕ್ತಿತ್ವಕ್ಕೆ ತಮ್ಮ ವಿಚಾರ ಮಂಡನೆಯಲ್ಲಿ ಕೇಳುಗನನ್ನು ನೇರ ಒಳಹೊಕ್ಕುವ ಖಚಿತತೆ ಇತ್ತು. ಬುದ್ಧನ ಜೀವನದಲ್ಲೂ ನಾವು ಕಾಣುವಂತಹ ಎಲ್ಲವನ್ನೂ ಸ್ಫಟಿಕದಂತೆ ನೇರವಾಗಿ ಖಚಿತವಾಗಿ ಕಾಣುವ ಶಕ್ತಿಯದು, ಇದನ್ನು ಅಂದಿನ ಸಮಸ್ತ ಭಾರತವೂ ಕಾಣಲೂ ಸಾಧ್ಯವಾಯಿತೆಂದು ಇತಿಹಾಸದಿಂದ ತಿಳಿದುಬರುತ್ತದೆ. ಮಂಡನ ಮಿಶ್ರರಂತಹ ತೇಜಸ್ವೀ ಬ್ರಹ್ಮ ಜ್ಞಾನಿಗಳೇ ಶ್ರೀ ಸುರೇಶ್ವರಾಚಾಯ೯ ಎಂಬ ಹೆಸರಿನಿಂದ ಪ್ರಸಿದ್ಧರಾದ ಶಂಕರರ ಶಿಷ್ಯರಾದರು. ಶಂಕರರು ದೇಶದ ನಾಲ್ಕು ದಿಕ್ಕುಗಳಲ್ಲಿ ನಾಲ್ಕು ಪೀಠ (ಮಠ) ಗಳನ್ನು ಸ್ಥಾಪಿಸಿ, ಪ್ರತಿಯೊಂದು ಪೀಠಕ್ಕೂ ತಮ್ಮ ಒಬ್ಬೊಬ್ಬ ಶಿಷ್ಯರನ್ನು ಪೀಠಾಧಿಪತಿಯನ್ನಾಗಿಸಿದರು. ಹೀಗೆ "ಅದ್ವೈತ" ಸಿದ್ಧಾಂತವನ್ನು ಜನಪ್ರಿಯಗೊಳಿಸಿದರು.
ಬುದ್ಧಿವಂತಿಕೆಯ ತರ್ಕ ವಾದಗಳನ್ನೇ ಬಂಡವಾಳ ಮಾಡಿಕೊಂಡು, ಮತ್ತೊಬ್ಬರನ್ನು ಹೀಯಾಳಿಸುತ್ತಾ, ಮುಗ್ಧ ಜನರನ್ನು ಶೋಷಿಸುತ್ತಾ ತಾವೇ ಭಗವಂತನ ಅಪರಾವತಾರ ಎಂದುಕೊಳ್ಳುವ ಜನ ಈ ಕಾಲದಲ್ಲಿ ಹೇಗಿದ್ದಾರೋ ಅಂದೂ ಇದ್ದರು. ಆದರೆ ಶಂಕರರ ದಿವ್ಯತೇಜಸ್ಸಿನ ಮುಂದೆ ಅವರೆಲ್ಲರೂ ಸೋಲುಕಾಣಬೇಕಾಯಿತು. ಹೀಗೆ ಹಲವಾರು ಪಂಡಿತರನ್ನೂ ಶಾಸ್ತ್ರವೇತ್ತರನ್ನೂ ಜಯಿಸಿ, ಶಂಕರರು ಸರ್ವಜ್ಞಪೀಠವನ್ನೇರಿದರು. ಭಾರತದ ದಕ್ಷಿಣದಲ್ಲಿ ವಾದಮಾಡಿ ತಮ್ಮನ್ನು ಜಯಿಸುವವರೇ ಇಲ್ಲವೆಂದು ಹೀಗಳೆದು ಶಾರದೆಯ ದೇಗುಲದ ದಕ್ಷಿಣದ ಬಾಗಿಲನ್ನು ಮುಚ್ಚಿಸಿದ್ದ ಕಾಶ್ಮೀರದ ಪಂಡಿತರ ಬಾಯಿ ಮುಚ್ಚಿಸಿದರು; ಕಾಶ್ಮೀರಪುರವಾಸಿನಿ ಶಾರದೆಯ ದೇಗುಲದ ದಕ್ಷಿಣದ್ವಾರವನ್ನೂ, ಅದರೊಂದಿಗೆ ದುರಹಂಕಾರಿ ಔತ್ತರೇಯರ ಕಣ್ಣನ್ನೂ ತೆರೆಸಿದ ಮಹನೀಯರಾದರು.
ಉತ್ತರದಲ್ಲಿ ಬದರಿ ಪೀಠ, ಉತ್ತರಾಮ್ನಾಯ ಜ್ಯೋತಿರ್ ಮಠ; ದಕ್ಷಿಣದಲ್ಲ ಶೃಂಗೇರಿ ಪೀಠ - ದಕ್ಷಿಣಾಮ್ನಾಯ ಶಾರದಾ ಮಠ; ಪೂರ್ವದಲ್ಲಿ ಪುರಿ ಪೀಠ - ಪೂರ್ವಾಮ್ನಾಯ ಗೋವರ್ಧನ ಮಠ; ಪಶ್ಚಿಮದಲ್ಲಿ ದ್ವಾರಕಾ ಪೀಠ - ಪಶ್ಚಿಮಾಮ್ನಾಯ ಮಠ ಈ ನಾಲ್ಕೂ ಮಠಗಳು ಇಂದಿಗೂ ತಮ್ಮ ಗುರು ಪರಂಪರೆಯನ್ನು ಮುಂದುವರಿಸಿಕೊಂಡು ಬಂದಿವೆ.
ಶಂಕರರು ಬಾದರಾಯಣರ "ಬ್ರಹ್ಮಸೂತ್ರ" (ವೇದಾಂತಸೂತ್ರ)ಗಳಿಗೆ ಭಾಷ್ಯವನ್ನು ರಚಿಸಿದರು. ಉಪನಿಷತ್ತುಗಳಿಗೆ ವ್ಯಾಖ್ಯಾನ ನೀಡಿದರು; ಅಲ್ಲದೆ ಶ್ರೀಮದ್ಭಗವದ್ಗೀತೆಗೆ ಭಾಷ್ಯವನ್ನು ಬರೆದು ಪ್ರಸ್ಥಾನತ್ರಯಗಳನ್ನು ಪೂರ್ಣಗೊಳಿಸಿದರು. ‘ಭಜ ಗೋವಿಂದಮ್’, ‘ಸೌಂದರ್ಯ ಲಹರಿ’ ಮುಂತಾದ ಹಲವಾರು ಸೊಗಸಾದ ಸ್ತೋತ್ರಗಳನ್ನೂ ಕೂಡಾ
ಶಂಕರರು ರಚಿಸಿದ್ದಾರೆ.
ತಾಯಿಗೆ ಕೊಟ್ಟ ಮಾತಿನ ಪ್ರಕಾರ ಆಕೆಯ ಕೊನೆಗಾಲದಲ್ಲಿ ಕಾಲಟಿಗೆ ಹಿಂದಿರುಗಿದ ಶಂಕರರು ಆಕೆಯ ಅಂತಿಮ ವಿಧಿಗಳನ್ನು ಪೂರೈಸಿದರು. ತಮ್ಮ ಮೂವತ್ತೆರಡನೇ ವಯಸ್ಸಿನಲ್ಲಿ ಶಂಕರರು ಬ್ರಹ್ಮೈಕ್ಯರಾದರು.
ಸಂಸ್ಕೃತದಲ್ಲಿ "ದ್ವಿ" ಎಂದರೆ ಎರಡು ಎಂದರ್ಥ. ಹಾಗಾಗಿ "ಅ" + "ದ್ವೈತ" ಅಂದರೆ "ಎರಡಲ್ಲದ್ದು" ಎಂದು ಅರ್ಥೈಸಬಹುದು. ಅದ್ವೈತ ಸಿಧ್ಧಾಂತದ ಮೂಲ ಸಾರವೇ ಇದು. "ಆತ್ಮ" ಮತ್ತು "ಪರಮಾತ್ಮ" ಎಂಬುದು ಎರಡು ಬೇರೆ ಬೇರೆ ಅಂಶಗಳಲ್ಲ. ಇರುವುದು ಒಂದೇ. ಆತ್ಮನೇ ಪರಮಾತ್ಮ (ದೇವರು). ಪರಮಾತ್ಮನೇ ಆತ್ಮ. "ಅಹಂ ಬ್ರಹ್ಮಾಸ್ಮಿ" (ನನ್ನೊಳಿರುವ ಆತ್ಮವೇ ಪರಂಬ್ರಹ್ಮ), "ತತ್ ತ್ವಮ್ ಅಸಿ" (ನೀನು ಅದೇ ಆತ್ಮದಿಂದ ಆಗಿರುವೆ) ಎಂಬುದು ಅದ್ವೈತ ತತ್ವದ ಮೂಲ ಮಂತ್ರ. ಆದಿ ಶಂಕರಾಚಾರ್ಯರು ಪರಮಾತ್ಮ, ಅಂದರೆ "ಆತ್ಮ", ಅದು ಮಾತ್ರ ಸತ್ಯ; ಈ ಜಗತ್ತಿನಲ್ಲಿ ಮಿಕ್ಕೆಲ್ಲವೂ ಮಿಥ್ಯ ಹಾಗೂ "ಸರ್ವಂ ಬ್ರಹ್ಮಮಯಂ ಜಗತ್" (ಈ ಜಗತ್ತಿನಲ್ಲಿ ಎಲ್ಲವೂ ಪರಮಾತ್ಮನಿಂದಲೇ ಆವರಿಸಲ್ಪಟ್ಟಿದೆ) ಎಂಬುದಾಗಿ ಜಗತ್ತಿಗೆ ತಿಳಿಯುವಂತೆ ವಿವರಿಸಿದರು.
ಇಂತಹ ಶಕ್ತಿ ಈ ಲೋಕದಲ್ಲಿ ಮೂಡಿ, ಈ ಲೋಕ ಸುಂದರಬನವಾಗಿ, ನೆಮ್ಮದಿ ಸಂತೋಷ ಆಧ್ಯಾತ್ಮದ ಹೂಗಳು ಈ ತೋಟದಲ್ಲಿ ಅರಳಿ, ಈ ಭೂಲೋಕ ಸುಂದರ ನಂದನವನವಾಗಲಿ ಎಂದು ಹಾರೈಸುತ್ತಾ, ಆದಿ ಶಂಕರರ ಪಾದಾರವಿಂದಗಳಲ್ಲಿ ಭಕ್ತಿಯ ನಮನ ಸಲ್ಲಿಸೋಣ.
Audio files about Adi Shankaracharya:
Comments
Blogನ ಹೊಸ ಹೆಸರು ಚೆನ್ನಾಗಿದೆ. ’ಮನದ ಮಾತು’ ಕೂಡ ಒಳ್ಳೆದೇ ಇತ್ತು!
ಶ್ರೀ ಶಂಕರರು ಆಗ ಬಂದಿಲ್ಲದಿದ್ದರೆ ಇಂದೇನಾಗುತ್ತಿತ್ತೋ?
ಈ blog ನಲ್ಲಿ ಒಂದೇ ತೊಂದರೆಯೆಂದರೆ ನನ್ನ ಪ್ರತಿ-ಪ್ರತಿಕ್ರಿಯೆ ನಿಮಗೆ ತಲುಪಿತೋ ಇಲ್ಲವೋ ಎಂದು ಗೊತ್ತಾಗುವುದಿಲ್ಲ...