M K Gandhi


ಯಾರಿಗೂ ಅರ್ಥವಾಗದ ಬಾಪೂ …
ಬರೆದವರು; ಶ್ರೀಹರ್ಷ ಸಾಲಿಮಠ ಬೆಂಗಳೂರು . 
ಇದನ್ನು ಬೆಳಗೆರೆ ಕೃಷ್ಣಶಾಸ್ತ್ರಿಗಳು ಸ್ವತಃ ನನಗೆ ಹೇಳಿದ್ದು. ಈ ಘಟನೆ ನಡೆಯುವಾಗ ಶಾಸ್ತ್ರಿಗಳು ಖುದ್ದು ಎದುರಿಗೇ ಇದ್ದರಂತೆ. ಸ್ವಾತಂತ್ರ್ಯದ ಸಮಯ. ಭಾರತದ ಪ್ರಧಾನಿ ಯಾರಾಗಬೇಕೆಂದು ನಿರ್ಧರಿಸಲು ನಡೆದ ಶಾಸನ ಸಭೆಯಲ್ಲಿ ನಡೆದ ಚುನಾವಣೆಯಲ್ಲಿ ನೆಹರೂ ಸರ್ದಾರ್ ಪಟೇಲರ ಎದುರಿಗೆ ೧೧-೧ ಮತಗಳ ಅಂತರದಿಂದ ಸೋತಿದ್ದರು. ಸ್ವಯಂ ನೆಹರೂ ಬಿಟ್ಟು ಬೇರೆ ಯಾರೂ ನೆಹರೂರವರಿಗೆ ಮತ ಹಾಕಿರಲಿಲ್ಲ! ಇದಾದ ಮರುದಿನ ನೆಹರೂ ಗಾಂಧೀಜಿಯ ಬಳಿ ಬಂದು ನಿಮ್ಮ ಪ್ರಭಾವ ಬಳಸಿ ತಮ್ಮನ್ನು ಪ್ರಧಾನಿಯನ್ನಾಗಿ ಮಾಡಬೇಕೆಂದು ಕೇಳಿಕೊಂಡರು. ಅದಕ್ಕೆ ಗಾಂಧೀಜಿ “you are independent now. think independently. take independent decisions. why do you need my help?” ಎಂದರು. ನೆಹರೂಗೆ ನಿರಾಶೆಯಾಯಿತು. ವಾಪಸು ಹೊರಡಲು ಅನುವಾದರು. ಎರಡು ಹೆಜ್ಜೆ ಬಾಗಿಲ ದಿಕ್ಕಿನಲ್ಲಿ ನಡೆದು ಗಾಂಧೀಜಿಯ ತಿರುಗಿ “If I don’t become prime minister I will burn this country”ಎಂದರು. ಗಾಂಧೀಜಿ ಉತ್ತರಿಸದೆ ತಮ್ಮ ಕೆಲಸದಲ್ಲಿ ಮಗ್ನರಾದರು.
ಮರುದಿನ ಸರ್ದಾರ್ ಪಟೇಲರು ಗಾಂಧೀಜಿಯವರ ಬಳಿ ಬಂದರು. ಸ್ವಲ್ಪ ಮಾತಾದ ಮೇಲೆ “ನೆಹರೂ ಇಲ್ಲಿಗೆ ಬಂದಿದ್ದರೆ?” ಎಂದು ಕೇಳಿದರು. ಬಾಪೂ “ಹೌದು” ಎಂದರು. “ಏನು ಹೇಳಿದರು ನೆಹರೂ?” ಗಾಂಧೀಜಿ ಎಂದೂ ಸುಳ್ಳು ಹೇಳುವವರಲ್ಲ. ತಮ್ಮಿಬ್ಬರ ನಡುವೆ ನಡೆದ ಸಂಭಾಷಣೆಯನ್ನು ತಿಳಿಸಿ ಕೊನೆಗೆ ಹೋಗುವಾಗ ” I will burn this country”ಎಂದು ಹೇಳಿದರು ಎಂಬ ವರದಿ ಒಪ್ಪಿಸಿದರು. ಪಟೇಲರ ಮುಖ ಗಂಭೀರವಾಯಿತು. ಅವರು ಗಾಂಧೀಜಿಯವರನ್ನು “ಇದಕ್ಕೆ ನೀವು ನನಗೆ ಎನು ಹೇಳುತ್ತೀರಿ ?” ಎಂದು ಕೇಳಿದರು. ಗಾಂಧೀಜಿಯದ್ದು ಅದೇ ಉತ್ತರ “ಅವರಿಗೆ ಎನು ಹೇಳಿದೆನೋ ನಿಮಗೂ ಅದೇ ಅನ್ವಯಿಸುತ್ತದೆ you are independent now. think independently. take independent decisions” ಎಂದು ತಮ್ಮ ಚರಕದಲ್ಲಿ ಮಗ್ನರಾದರು ಬಾಪೂ. ಸಲ್ಪ ಹೊತ್ತು ಯೋಚಿಸಿದ ಪಟೇಲರು. “I will not allow this country to burn” ಎಂದು ಹೇಳಿ ಎದ್ದು ಹೋದರು.
ಗಾಂಧೀಜಿಯೇ ನೆಹರೂರನ್ನು ಅಧಿಕಾರ ಪ್ರಯೋಗಿಸಿ ಪ್ರಧಾನಿಯನ್ನಾಗಿ ಮಾಡಿದ್ದು. ದೇಶ ವಿಭಜನೆಗೆ ಕಾರಣವಾಗಿದ್ದು ಎಂದು ಆರೋಪಿಸುವವರಿಗೆ ಮೇಲಿನ ಘಟನೆ ಉತ್ತರವೀಯಬಹುದು. ” ನೆಹರೂ ಪಾಶ್ಚಾತ್ಯ ನಾಗರೀಕತೆಯ ಆರಾಧಕರಾಗಿದ್ದರು. ಇದು ಗೊತ್ತಿದ್ದೂ ಗಾಂಧೀಜಿ ಯಾಕೆ ಅವರನ್ನು ಹತ್ತಿರ ಬಿಟ್ಟುಕೊಂಡರು?” ಎಂದು ನಾನು ಶಾಸ್ತ್ರಿಗಳನ್ನು ಕೇಳಿದೆ. ” ಗಾಂಧೀಜಿ ಯಾರನ್ನೂ ಹತ್ತಿರ ಬಾ ಎಂದು ಕರೆಯಲೂ ಇಲ್ಲ. ದೂರ ಹೋಗು ಎಂದು ನೂಕಲೂ ಇಲ್ಲ. ಅವರು ಎಲ್ಲರಿಗೂ ಮುಕ್ತವಾಗಿದ್ದರು. ನೆಹರೂ ಮಾಡಿದ ತಪ್ಪುಗಳಿಗೆ ಗಾಂಧೀಜಿಯವರನ್ನು ಹೊಣೆ ಮಾಡುವುದು ಸರಿಯಲ್ಲ” ಎಂದು ಉತ್ತರ ಬಂತು ಶಾಸ್ತ್ರಿಗಳಿಂದ.
ಸ್ವತಂತ್ರ್ಯಾನಂತರ ಗಾಂಧೀಜಿ ಆಶ್ರಮಕ್ಕೆ ಬ್ರಿಟಿಷ್ ಪತ್ರಕರ್ತರೊಬ್ಬರು ಭೇಟಿ ನೀಡಿದ್ದರು. ಆಗ ತಾನೆ ಉಪವಾಸದಿಂದ ಚೇತರಿಸಿಕೊಂಡು ಮಂಚದ ಮೇಲೆ ಮಲಗಿದ್ದ ಗಾಂಧೀಜಿಯವರನ್ನು “ಹೇಗಿದ್ದೀರಿ?” ಎಂದು ಕೇಳಿದರು. ಅದಕ್ಕೆ ಗಾಂಧೀಜಿ “ಹೇಗಿದ್ದೀರಿ ಎಂದು ಕೇಳುತ್ತಿದ್ದಿರಲ್ಲಾ? ನನ್ನ ದೇಹವನ್ನು ನೋಡಿ. ಹಿಂದುಸ್ತಾನ ಪಾಕಿಸ್ತಾನ ಎಂದು ಎರಡು ಭಾಗವಾಗಿದೆ. ದೇಹದ ಒಂದು ಭಾಗವನ್ನು ಕಳೆದುಕೊಂಡು ನಾನು ನರಳುತ್ತಿರುವುದು ನಿಮಗೆ ಕಾಣದೇ ? ” ಎಂದು ನೋವಿನಿಂದ ಉತ್ತರಿಸಿದರು.
ಇನ್ನೊಂದು ಘಟನೆ. ಇದು ಬ್ರಿಟಿಷ್ ಗೆಜೆಟಿಯರ್ ೧೯೩೧ ರಲ್ಲೂ ಪ್ರಕಟವಾಗಿದೆ. ದುಂಡು ಮೇಜಿನ ಪರಿಷತ್ತಿನಲ್ಲಿ ಪಾಲ್ಗೊಳ್ಳಲು ಗಾಂಧೀಜಿ ಬ್ರಿಟನ್ ಗೆ ಹೋದರು. ಈ ಭೇಟಿಯ ಸಮಯದಲ್ಲಿ ಅನೇಕ ಘಟನೆಗಳು ನಡೆದಿವೆಯಾದರೂ ಮುಖ್ಯವಾಗಿ ಇದನ್ನು ಉಲ್ಲೇಖಿಸುತ್ತಿದ್ದೇನೆ. ಬ್ರಿಟನ್ ನ ರಾಜನ ಆಹ್ವಾನದ ಮೇರೆಗೆ ಅರಮನೆಗೆ ಹೋದರು ಗಾಂಧೀಜಿ. ಆದರದಿಂದ ಸ್ವಾಗತಿಸಿದ ಬ್ರಿಟಿಷ್ ರಾಜ ಮಾತುಕತೆಯ ಸಮಯದಲ್ಲಿ ಗಾಂಧೀಜಿಯನ್ನು ಕೇಳಿದರು “ನಾವು ನಿಮ್ಮ ದೇಶವನ್ನು ಎಷ್ಟು ಅಭಿವೃದ್ಧಿ ಪಡಿಸಿದ್ದೇವೆ. ರಸ್ತೆಗಳು, ರೈಲುಗಳು, ಅಂಚೆ, ವಿದ್ಯುತ್, ಮೋಟಾರು ಬಂಡಿಗಳು ಶಿಕ್ಷಣ ಏನೆಲ್ಲಾ ವ್ಯವಸ್ಥೆ ಸುಖಗಳನ್ನು ನಿಮ್ಮ ಜನರಿಗಾಗಿ ನೀಡಿದ್ದೇವೆ. ಆದರೂ ನಮ್ಮನ್ನು ಹೊರದಬ್ಬಲು ನೀವು ಹೋರಾಡುತ್ತಿರುವುದೇಕೆ?”. ಗಾಂಧೀಜಿ ನಿರ್ಲಿಪ್ತವಾಗಿ ಹೇಳಿದರು ” ಈ ಪ್ರಕೃತಿಯಲ್ಲಿ ಎಲ್ಲಾದರೂ ಯಾವುದಾದರೂ ಪ್ರಾಣಿ ಅಥವಾ ಪಕ್ಷಿ ಇನ್ನೊಂದು ಜೀವಿಯ ಮೇಲೆ ದಬ್ಬಾಳಿಕೆ ನಡೆಸಿ ಅದನ್ನು ಬಂಧನದಲ್ಲಿಟ್ಟು ಬದುಕುವುದನ್ನು ನೋಡಿದ್ದೀರಾ ? ಇಲ್ಲ ತಾನೆ? ಸ್ವತಂತ್ರವಾಗಿ ಬದುಕುವುದು ಪ್ರಕೃತಿಯಲ್ಲಿನ ಪ್ರತಿ ಜೀವಿಯ ಹಕ್ಕು. ಹಾಗೆಯೇ ನಾವೂ ಸಹ ಪ್ರಾಕೃತಿಕವಾಗಿ ನಮಗೆ ದೊರಯಬೇಕಾಗಿದ್ದ ಹಕ್ಕನ್ನು ಕೇಳುತ್ತಿದ್ದೇವೆ ಅಷ್ಟೆ! ನಿಮ್ಮ ಲಂಡನ್‍ನ್ನು ಯಾವುದೋ ದೇಶದ ಜನ ಬಂದು ಹಿಡಿದಿಟ್ಟುಕೊಂಡರೆ ನೀವೇನು ಮಾಡುತ್ತೀರಿ? ಸುಮ್ಮನೆ ಸಹಿಸುತ್ತೀರಾ?” “ಅದನ್ನು ಹೇಗೆ ಸಹಿಸಲಾಗುತ್ತದೆ? ಅವರನ್ನು ಒದ್ದು ಓಡಿಸುತ್ತೇವೆ” ಎಂದು ರಾಜರು. “ನಿಮಗೆ ಬರಿ ಗುಲಾಮರಾಗುವ ಕಲ್ಪನೆಯೇ ಕೋಪ ತಂದಿತು. ನಾವು ಎಷ್ಟೊಂದು ವರ್ಷಗಳಿಂದ ಗುಲಾಮರಾಗಿದ್ದೇವೆ. ನಾವು ಯಾಕೆ ಸಹಿಸಿಕೊಳ್ಳಬೇಕು?” ಥಟ್ಟನೆ ಉತ್ತರ ಬಂತು ಗಾಂಧೀಜಿಯಿಂದ. ಗಾಂಧೀಜಿಯವರನ್ನು ಅರ್ಥ ಮಾಡಿಕೊಂಡವರು ಯಾರೂ ಇಲ್ಲ. ಸ್ವತಃ ಅವರ ಅನುಯಾಯಿಗಳೆನಿಸಿಕೊಂಡವರೇ ತಪ್ಪು ದಾರಿ ಹಿಡಿದರು.
ಗಾಂಧೀಜಿಯವರನ್ನು ಅವರನ್ನು ದೇಶದ್ರೋಹಿ ಎಂದು ಚಿತ್ರಿಸುವುದನ್ನು ನೋಡಿ ನೋವಾಗುತ್ತದೆ ಎಂದು ನಿಟ್ಟುಸಿರಾದರು ಶಾಸ್ತ್ರಿಗಳು.
ಈ ಲೇಖನಕ್ಕೆ ಬಂದ ಒಂದು ಪ್ರತಿಕ್ರೀಯೆ.ಅದೂ ಚೆನ್ನಾಗಿದೆ…..ಲೇಖನ ಚೆನ್ನಾಗಿದೆ. ಐತಿಹಾಸಿಕ ವ್ಯಕ್ತಿ ಮಾಡುವ ತಪ್ಪು ಕೂಡಾ ಐತಿಹಾಸಿಕವೇ ಆಗುತ್ತದೆ. ಅದಕ್ಕೆ ಆ ಪರಿಯ ವ್ಯಾಪ್ತಿ ದಕ್ಕುತ್ತದೆ. ಗಾಂಧೀಜಿ ಬಗ್ಗೆ ಆರೋಪಗಳನ್ನು ಹರಡುವುದು ಸುಲಭ. ಏಕೆಂದರೆ, ಅದನ್ನು ಖಂಡಿಸಿ ವಾದಕ್ಕೆ ನಿಲ್ಲುವವರು ಕಡಿಮೆ. ಹೀಗಾಗಿ, ಆದ ತಪ್ಪುಗಳ ಬಹುಪಾಲನ್ನು ಅವರ ಮೇಲೆ ಹೊರಿಸಲಾಗುತ್ತಿದೆ.

ನೆಹರು ಅಧಿಕಾರ ಲಾಲಸೆ ಎಂಥದೆಂಬುದನ್ನು ಎಲ್ಲರೂ ಬಲ್ಲರು. ಆದರೂ, ನೆಹರು ತಪ್ಪುಗಳಿಗೆ ಗಾಂಧೀಜಿಯನ್ನು ಹೊಣೆ ಮಾಡಲಾಗುತ್ತಿದೆ. ಇದು ಕೂಡಾ ಒಂದು ವ್ಯವಸ್ಥಿತ ಹುನ್ನಾರವೇ. ಸಮಾಜವಾದದ ಹೆಸರಿನಲ್ಲಿ ನೆಹರು ಮಾಡಿದ ಅನಾಚಾರಗಳ ಫಲವನ್ನು ಐವತ್ತು ವರ್ಷಗಳ ಕಾಲ ಅನುಭವಿಸಬೇಕಾಯಿತು. ಆದರೂ, ಅದರ ಬಗ್ಗೆ ವಿವರವಾಗಿ ಮಾತನಾಡಲು ನಮ್ಮ ಸೋ ಕಾಲ್ಡ್‌ ಸಮಾಜವಾದಿಗಳೇ ಸಿದ್ಧರಿಲ್ಲ.

ಹೀಗಾಗಿ, ಗಾಂಧೀಜಿಯನ್ನು ನೀವು ಬಿಂಬಿಸಿರುವ ಕೋನ ಇಷ್ಟವಾಗುತ್ತದೆ. ಯಾರು ಏನೇ ಗಳಹಿದರೂ ಸತ್ಯವನ್ನು ತುಂಬ ದಿನಗಳ ಕಾಲ ಮುಚ್ಚಿಡಲಾಗುವುದಿಲ್ಲ. ಇವತ್ತು ನೆಹರು ಇತಿಹಾಸದ ತಿಪ್ಪೆಯಲ್ಲಿದ್ದಾರೆ. ಗಾಂಧೀಜಿ ಮಾತ್ರ ಎಂದಿನಂತೆ ದೇದೀಪ್ಯಮಾನ.
___________________________________________________________________
ಈ ವಿಷಯಗಳ ಬಗ್ಗೆ ಗಾಂಧಿವಾದಿಗಳು ಎಂದಾದರೂ ಮಾತನಾಡಿದ್ದಾರಾ?
- Pratap Simha
ನಾಳೆ ಗಾಂಧಿ ಜಯಂತಿ. ಕಳೆದ ಏಪ್ರಿಲ್್ನಲ್ಲಿ ಗಾಂಧಿವಾದಿ ಅಣ್ಣಾ ಹಜಾರೆಯವರು ಮೊದಲ ಬಾರಿಗೆ ಉಪವಾಸ ಕುಳಿತಂದಿನಿಂದ ಗಾಂಧೀಜಿ ಬಹುಚರ್ಚಿತ ವಿಷಯವಾಗಿಬಿಟ್ಟಿದ್ದಾರೆ. ಉಪವಾಸದಂತಹ ಗಾಂಧಿ ಮಾರ್ಗದ ಬಗ್ಗೆ ಕಾಂಗ್ರೆಸ್ಸೇ ಸಣ್ಣದಾಗಿ ಅಪಸ್ವರವೆತ್ತಿದ್ದನ್ನೂ ನಾವು ನೋಡಿದ್ದಾಯಿತು. ಇನ್ನು ಗಾಂಧೀಜಿಯವರನ್ನು ಮೆಚ್ಚುವವರ ಬಗಲಲ್ಲೇ ಟೀಕಿಸುತ್ತಾ ಬಂದವರೂ ಸಾಕಷ್ಟಿದ್ದಾರೆ. ಹಾಗೆ ಟೀಕಿಸಿದವರನ್ನು”ಗೋಡ್ಸೆ ಸಂಸ್ಕೃತಿ’ಯವರು ಎಂದು ಬಹಳ ಆಕ್ರಮಣಕಾರಿಯಾಗಿ ಹರಿಹಾಯುವವರೂ ನಮ್ಮ ನಡುವೆ ಇದ್ದಾರೆ. ಇಂಥದ್ದೊಂದು ಆಕ್ರೋಶ, ಕೋಪತಾಪ ಪ್ರದರ್ಶಿಸುವ ಗಾಂಧಿವಾದಿಗಳು, ಗಾಂಧಿ ಟೋಪಿಧಾರಿಗಳು ಗಾಂಧೀಜಿ ಪ್ರತಿಪಾದಿಸಿದ ಮೌಲ್ಯಗಳಿಗೆ ಎಷ್ಟರಮಟ್ಟಿಗೆ ಬದ್ಧರಾಗಿದ್ದಾರೆ? ತಮ್ಮ ಮಾತು-ನಡತೆಯಲ್ಲಿ ಗಾಂಧೀಜಿಯವರನ್ನು ಎಷ್ಟರ ಮಟ್ಟಿಗೆ ಅನುಸರಿಸುತ್ತಿದ್ದಾರೆ? ಇಷ್ಟಕ್ಕೂ ಮಹಾತ್ಮ ಗಾಂಧೀಜಿಯವರು ಯಾವ ಮೌಲ್ಯಗಳನ್ನು ಪ್ರತಿಪಾದಿಸುತ್ತಿದ್ದರು? ಯಾವ ವಿಚಾರಗಳಲ್ಲಿ ನಂಬಿಕೆ ಇಟ್ಟಿದ್ದರು? ಯಾವ ವಿಷಯಗಳನ್ನು, ಧೋರಣೆಗಳನ್ನು, ಮನಃಸ್ಥಿತಿಗಳನ್ನು ಗಾಂಧೀಜಿ ಕಟುವಾಗಿ ಟೀಕಿಸುತ್ತಿದ್ದರು?ವಿಷಯ-1‘Gandhiji was not awarded the Nobel peace prize because he refused to be converted’! ಹಾಗೆಂದು ಹೇಳಿದವರು ಯಾವ ಹಿಂದುತ್ವವಾದಿಯೂ ಅಲ್ಲ, ವಿಶ್ವವಿಖ್ಯಾತ ಲೇಖಕ, ಬರಹಗಾರ, ದಾರ್ಶನಿಕ ಸ್ಟೀಫನ್ ನ್ಯಾಪ್. ಅವರು ಹೇಳಿದಂತೆ ಕ್ರೈಸ್ತರಾಗಿ ಮತಾಂತರಗೊಳ್ಳಲು ನಿರಾಕರಿಸಿದ ಕಾರಣಕ್ಕೇ ಗಾಂಧೀಜಿಗೆ ನೊಬೆಲ್ ಶಾಂತಿ ಪ್ರಶಸ್ತಿ ದೊರೆಯಲಿಲ್ಲವೆ? ಅದು ನಿಜವೆಂದಾದರೆ ಗಾಂಧೀಜಿಗೂ ಕ್ರೈಸ್ತ ಮತಿಯರಿಗೂ ಯಾವುದಾದರೂ ವೈಷಮ್ಯ ಅಥವಾ ಅಭಿಪ್ರಾಯಭೇದಗಳಿದ್ದವೆ? ನ್ಯಾಪ್ ಮುಂದುವರಿದು ಎಚ್ಚರಿಸುತ್ತಾರೆ-’ಇಂದು ಕ್ರೈಸ್ತ ಮಿಷನರಿಗಳು ಭಾರತದಾದ್ಯಂತ ತಮ್ಮ ಕಬಂಧಬಾಹುಗಳನ್ನು ಚಾಚಿದ್ದು ಆಮಿಷ, ಪ್ರಚೋದನೆ, ಮೋಸ, ಬೆದರಿಕೆಗಳ ಮೂಲಕ ಜನರನ್ನು ಮತಾಂತರ ಮಾಡುತ್ತಿದ್ದಾರೆ. ಈಶಾನ್ಯ ಭಾರತದಲ್ಲಿ ಈ ರೀತಿಯ ಬೆದರಿಕೆ, ಕೊಲೆಗಳು ಸರ್ವೇಸಾಮಾನ್ಯವಾಗಿ ಬಿಟ್ಟಿವೆ. ಈ ಸಮಸ್ಯೆಯನ್ನು ಅರ್ಥಮಾಡಿಕೊಳ್ಳುವ ಹಾಗೂ ಅದಕ್ಕೆ ತಕ್ಕ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಗಾಂಧೀಜಿಯವರ ಸಂದೇಶ ಬಹಳ ಮುಖ್ಯವಾಗುತ್ತದೆ. ನಿರ್ಲಕ್ಷ್ಯ ತಳೆದರೆ ಈ”ಮಿಷನರಿ ಟೆರರಿಸಂ’ ಇಸ್ಲಾಮಿಕ್ ಭಯೋತ್ಪಾದನೆಯಷ್ಟೇ ಅಪಾಯಕಾರಿಯಾಗಿ ಪರಿಣಮಿಸುತ್ತದೆ’. ಹಾಗಾದರೆ ಗಾಂಧೀಜಿಯವರು ಕ್ರೈಸ್ತ ಮಿಷನರಿಗಳ ಬಗ್ಗೆ, ಮತಾಂತರದ ಬಗ್ಗೆ ಯಾವ ಅಭಿಪ್ರಾಯ ಹೊಂದಿದ್ದರು?ಮೊದಲಿಗೆ ಇಸ್ಲಾಂ, ತದನಂತರ ಕ್ರಿಶ್ಚಿಯಾನಿಟಿ. ಭಾರತ ಹಲವು ಶತಮಾನಗಳಿಂದಲೂ ಈ ಎರಡು ಮತಗಳ ಆಕ್ರಮಣವನ್ನು ಎದುರಿಸುತ್ತಾ ಬಂದಿದೆ. ಇಂಥದ್ದೊಂದು ಅಪಾಯದ ಬಗ್ಗೆ ಜಾಗತಿಕ ಮಟ್ಟದಲ್ಲಿ ಧ್ವನಿಯೆತ್ತಿದವರಲ್ಲಿ ಇಬ್ಬರು ಪ್ರಮುಖರು. ಮೊದಲನೆಯವರು ಸ್ವಾಮಿ ವಿವೇಕಾನಂದ, ಎರಡನೆಯವರು ಮಹಾತ್ಮ ಗಾಂಧೀಜಿ! ‘Hindus need to be saved from spiritual darkness’ ಇದು ಕ್ರೈಸ್ತ ಮಿಷನರಿಗಳ ಘೋಷವಾಕ್ಯವಾಗಿದ್ದ ಕಾಲದಲ್ಲಿ ಹಿಂದುಧರ್ಮದ ಶ್ರೇಷ್ಠತೆಯನ್ನು ಜಗತ್ತಿಗೆ ಸಾರುವ, ಎತ್ತಿ ಹಿಡಿಯುವ ಕೆಲಸಕ್ಕೆ ಕೈಹಾಕಿದ ಸ್ವಾಮಿ ವಿವೇಕಾನಂದರು ಅಕಾಲಿಕ ಮರಣವನ್ನಪ್ಪಿದ ನಂತರ ನಮ್ಮ ಧರ್ಮದ ಮೇಲಾಗುತ್ತಿದ್ದ ದೌರ್ಜನ್ಯದ ವಿರುದ್ಧ”ಗ್ಲೋಬಲ್ ವಾಯ್ಸ್್’ ಆಗಿ ಹೊರಹೊಮ್ಮಿದವರು ಗಾಂಧೀಜಿ. ಕ್ರೈಸ್ತ ಮಿಷನರಿಗಳನ್ನು’Vendors of goods’ ಎಂದು ಟೀಕಿಸಿದರು.”ಈ ಮಿಷನರಿಗಳನ್ನು ಮನೆಯೊಳಗೆ ಬಿಟ್ಟುಕೊಳ್ಳುವುದೆಂದರೆ ನಮ್ಮ ಕುಟುಂಬದ ಅವನತಿಯಾದಂತೆ. ನಮ್ಮ ಆಚಾರ, ವಿಚಾರ, ಊಟ, ಉಡುಪು, ನಡತೆ ಎಲ್ಲವನ್ನೂ ಹಾಳುಗೆಡವುತ್ತಾರೆ’ ಎಂದು ಗಾಂಧೀಜಿ ಎಚ್ಚರಿಸುತ್ತಾರೆ.1. ನಾನೊಬ್ಬ ಸನಾತನಿ ಹಿಂದು ಎಂದೇಕೆ ಕರೆದುಕೊಳ್ಳುತ್ತೇನೆ?2. ನಾನೇಕೆ ಮತಾಂತರಗೊಳ್ಳಲಿಲ್ಲ?3. ಮತಾಂತರದಲ್ಲಿ ನನಗೇಕೆ ನಂಬಿಕೆಯಿಲ್ಲ?4. ಮತಾಂತರವೆಂಬುದು ಶಾಂತಿಗೆ ಒಂದು ತೊಡಕು ಹೇಗೆ?5. ಒಂದು ಧರ್ಮದಿಂದ ಮತ್ತೊಂದು ಧರ್ಮಕ್ಕೆ ಹಾರುವ ಕ್ರಮವೇಕೆ ಸರಿಯಲ್ಲ?6. ಅನ್ಯಧರ್ಮೀಯನೊಬ್ಬನನ್ನು ಹಿಂದುವಾಗಿ ಮತಾಂತರ ಮಾಡುವುದನ್ನೂ ನಾನೇಕೆ ಒಪ್ಪುವುದಿಲ್ಲ?7. ಬಹುತೇಕ ಭಾರತೀಯ ಕ್ರೈಸ್ತರೇಕೆ ತಮ್ಮ ಮೂಲದ ಬಗ್ಗೆ ಅಸಹ್ಯಪಟ್ಟುಕೊಳ್ಳುತ್ತ ಅಮೆರಿಕನ್ನರು ಮತ್ತು ಯುರೋಪಿಯನ್ನರ ಅಂಧಾನುಕರಣೆಗೆ ಮುಂದಾಗಿದ್ದಾರೆ?8. ಹಿಂದು ಧರ್ಮವನ್ನು ಬುಡಮೇಲು ಮಾಡುವ ಮಿಷನರಿಗಳ ಹುನ್ನಾರ, ಉದ್ದೇಶವೆಂಥದ್ದು?9. ಒಬ್ಬ ಹಿಂದು ಹಿಂದುವಾಗಿ ಉಳಿದರೆ ಇವರಿಗೇನು ನೋವು?10. ಈ ಮಿಷನರಿಗಳು ಧರ್ಮದ ವ್ಯಾಪಾರಿಗಳು ಹೇಗಾಗುತ್ತಾರೆ?11. ನಮ್ಮ ಹರಿಜನರನ್ನು ಮತಾಂತರ ಮಾಡುವುದನ್ನು ಏಕೆ ನಾನು ವಿರೋಧಿಸುತ್ತೇನೆ?12. ಮತಾಂತರವೆಂದರೆ ಅತ್ಮ ಶುದ್ಧೀಕರಣವೇ ಹೊರತು ಮತ ಬದಲಾವಣೆಯಲ್ಲ!13. ಕ್ರಿಶ್ಚಿಯಾನಿಟಿ ಮತ್ತು ಅದರ ಸಾಮ್ರಾಜ್ಯಶಾಹಿ ಮನಸ್ಥಿತಿ14. ಈ ಮಿಷನರಿಗಳು ಬಡವರನ್ನು, ಬಡತನವನ್ನೇ ಏಕೆ ಗುರಿಯಾಗಿಸಿಕೊಳ್ಳುತ್ತಾರೆ?15. ಇಷ್ಟಕ್ಕೂ ನಾನೇಕೆ ನನ್ನ ಧರ್ಮವನ್ನು ಬದಲಾಯಿಸಲಿ?1921ರಿಂದ 1937ರವರೆಗೂ ಇಂತಹ ಒಂದೊಂದು ಪ್ರಶ್ನೆಗಳನ್ನೆತ್ತಿಕೊಂಡು ತಮ್ಮ”ಯಂಗ್ ಇಂಡಿಯಾ’ ಮತ್ತು”ಹರಿಜನ’ ಪತ್ರಿಕೆಗಳಲ್ಲಿ ಮಹಾತ್ಮ ಗಾಂಧೀಜಿಯವರು ಮತಾಂತರವನ್ನು ಖಂಡಿಸಿ, ಮಿಷನರಿಗಳ ನೈಜ ಉದ್ದೇಶದ ಮೇಲೆ ಬೆಳಕು ಚೆಲ್ಲಿ ಸತತವಾಗಿ ಬರೆಯುತ್ತಾರೆ. ಇವತ್ತು ಪಾಶ್ಚಿಮಾತ್ಯ ರಾಷ್ಟ್ರಗಳು ಜೀಸಸ್್ನ ಯಾವ ತತ್ವವನ್ನು ಪಾಲಿಸುತ್ತಿವೆ ಎಂದು ಪ್ರಶ್ನಿಸುತ್ತಾರೆ, ಉದಾಹರಣೆ ಸಮೇತ ಅವುಗಳ ಇಬ್ಬಂದಿ ನಿಲುವನ್ನು ಖಂಡಿಸುತ್ತಾರೆ. 1937, ಜೂನ್ 3ರ”ಹರಿಜನ’ದಲ್ಲಿ,”ಜೀಸಸ್್ನೊಬ್ಬ ಮಾನವೀಯತೆಯ ಮಹಾನ್ ಭೋದಕ. ಆದರೆ ಅವನೊಬ್ಬನೇ ದೈವೀ ಪುತ್ರನೆಂಬುದನ್ನು ನಾನು ಒಪ್ಪುವುದಿಲ್ಲ. ನಾವೆಲ್ಲರೂ ದೇವರ ಮಕ್ಕಳೇ. ದೇವರು ಯಾರೋ ಒಬ್ಬನಿಗೆ ಮಾತ್ರ ಪಿತೃವಾಗಲು ಸಾಧ್ಯವಿಲ್ಲ’ ಎಂದು ಬರೆಯುತ್ತಾರೆ. ಬೈಬಲ್ಲನ್ನು ಚೆನ್ನಾಗಿ ಓದಿಕೊಂಡಿದ್ದ, ಅದರಲ್ಲಿನ ಮಾನವೀಯ ಮೌಲ್ಯಗಳನ್ನು ಮೆಚ್ಚಿಕೊಂಡಿದ್ದ, ಜೀಸಸ್್ನಿಂದ ಪ್ರೇರಿತರಾಗಿಯೇ ಯಾರಾದರೂ ಒಂದು ಕೆನ್ನೆಗೆ ಹೊಡೆದರೆ ಇನ್ನೊಂದನ್ನು ತೋರಿ ಎನ್ನುತ್ತಿದ್ದ ಗಾಂಧೀಜಿ, ಮತಾಂತರವನ್ನು ಮಾತ್ರ ಸುತರಾಂ ಒಪ್ಪುತ್ತಿರಲಿಲ್ಲ. ಅದರ ಬಗ್ಗೆ ಎಷ್ಟು ಕುಪಿತರಾಗಿದ್ದರೆಂದರೆ”ಒಂದು ವೇಳೆ ನನ್ನ ಬಳಿ ಅಧಿಕಾರವಿದ್ದರೆ, ಕಾನೂನು ತರುವ ಸಾಮರ್ಥ್ಯ ನನಗಿದ್ದಿದ್ದರೆ ನಾನು ಮಾಡುತ್ತಿದ್ದ ಮೊದಲ ಕೆಲಸ ಮತಾಂತರದ ನಿಷೇಧ’ ಎಂದಿದ್ದರು ಬಾಪೂಜಿ.ವಿಷಯ-2‘ನನ್ನೊಬ್ಬ ಮುಸಲ್ಮಾನ ಸ್ನೇಹಿತ ಕೆಲ ಸಮಯದ ಹಿಂದೆ ಪುಸ್ತಕವೊಂದನ್ನು ಕಳುಹಿಸಿದ್ದ. ಒಂದು ತೊಟ್ಟು ಹಾಲನ್ನೂ ಬಿಡಲೊಪ್ಪದೆ ಹಸುವನ್ನು ಹೇಗೆ ಹಿಂಡುತ್ತೇವೆ, ಅವುಗಳನ್ನು ಹೇಗೆ ಹಸಿವಿನಿಂದ ನರಳಿಸುತ್ತೇವೆ, ಎತ್ತುಗಳನ್ನು ಹೇಗೆ ದುಡಿಸಿಕೊಳ್ಳುತ್ತೇವೆ, ಅತಿಭಾರ ಹಾಕಿ ಹೇಗೆ ದೌರ್ಜನ್ಯಕ್ಕೆ ಈಡುಮಾಡುತ್ತೇವೆ. ಒಂದು ವೇಳೆ ಅವುಗಳಿಗೆ ಮಾತು ಬಂದಿದ್ದರೆ ನಮ್ಮ ದೌರ್ಜನ್ಯಕ್ಕೆ ಸಾಕ್ಷಿಯಾಗುತ್ತಿದ್ದವು, ಜಗತ್ತು ದಿಗ್ಭ್ರಮೆಗೊಳ್ಳುತ್ತಿತ್ತು ಎಂಬುದನ್ನು ಅದರಲ್ಲಿ ವಿವರಿಸಲಾಗಿತ್ತು’.ಅದನ್ನು 1921, ಅಕ್ಟೋಬರ್ 6ರ”ಯಂಗ್ ಇಂಡಿಯಾ’ದಲ್ಲಿ ಗಾಂಧೀಜಿ ಬರೆಯುತ್ತಾರೆ.”ನಾನು ಗೋವನ್ನು ಗೌರವಿಸುತ್ತೇನೆ, ಪ್ರೀತಿಯಿಂದ ಕಾಣುತ್ತೇನೆ. ಗೋವು ಕೃಷಿ ಆಧಾರಿತ ಈ ದೇಶದ ರಕ್ಷಕಿ. ನಮ್ಮ ಮುಸಲ್ಮಾನ ಸಹೋದರರೂ ಇದನ್ನು ಒಪ್ಪುತ್ತಾರೆ. ನಾನು ಗೋವನ್ನು ಗೌರವಿಸಿದಂತೆ ನನ್ನ ದೇಶವಾಸಿಗಳನ್ನೂ ಗೌರವಿಸುತ್ತೇನೆ. ಆತ ಹಿಂದು ಇರಬಹುದು, ಮುಸಲ್ಮಾನನಾಗಿರಬಹುದು. ಹಸುವಿನಷ್ಟೇ ಮನುಷ್ಯನೂ ಉಪಯೋಗಕಾರಿ. ಅಂದಮಾತ್ರಕ್ಕೆ ಹಸುವನ್ನು ರಕ್ಷಿಸುವುದಕ್ಕೋಸ್ಕರ ಮುಸಲ್ಮಾನನ ವಿರುದ್ಧ ನಾನು ಹೊರಡಬೇಕಾ, ಕೊಲ್ಲಬೇಕಾ? ಹಾಗೆ ಮಾಡಿದರೆ ನಾನು ಮುಸಲ್ಮಾನ ಹಾಗೂ ಗೋವು ಇಬ್ಬರ ಶತ್ರುತ್ವವನ್ನೂ ಕಟ್ಟಿಕೊಳ್ಳಬೇಕಾಗುತ್ತದೆ. ಆದ್ದರಿಂದ ಗೋವನ್ನು ಸಂರಕ್ಷಿಸಲು ನನಗೆ ಕಾಣುವ ಏಕೈಕ ಮಾರ್ಗವೆಂದರೆ ನನ್ನ ಮುಸಲ್ಮಾನ ಸಹೋದರರಿಗೆ ಮನವರಿಕೆ ಮಾಡಿಕೊಡುವುದು’. ಹೀಗೆ ಗೋಸಂರಕ್ಷಣೆಯ ಬಗ್ಗೆ ಗಾಂಧೀಜಿ ಬಹುವಾಗಿ ವಿವರಿಸುತ್ತಾರೆ. ಗೋವು ಪೂಜನೀಯ ಎಂಬುದನ್ನು ಅವರ ಬರವಣಿಗೆಗಳಲ್ಲೆಲ್ಲ ಪ್ರತಿಪಾದಿಸುತ್ತಾರೆ.ವಿಷಯ-3ರಾಮರಾಜ್ಯ! ಭಾರತ ಸ್ವತಂತ್ರಗೊಂಡ ಕೂಡಲೇ ಅದನ್ನು ರಾಮರಾಜ್ಯವನ್ನಾಗಿ ಮಾಡುವುದಾಗಿ ಮೊದಲು ಹೇಳಿದವರೇ ಮಹಾತ್ಮ ಗಾಂಧೀಜಿ. ಅಂದರೆ ಸ್ವಾತಂತ್ರ್ಯ ನೀಡಿದ ನಂತರ ಯಾವ ರೀತಿಯ ವ್ಯವಸ್ಥೆ ರೂಪಿಸುತ್ತೀರಿ ಎಂಬ ಪ್ರಶ್ನೆಗೆ”ರಾಮನಂಥ ಅದರ್ಶ ರಾಜ್ಯ’ ಎಂದಿದ್ದರು ಮಹಾತ್ಮ. ಇನ್ನೂ ಬಿಡಿಸಿ ಹೇಳುವುದಾದರೆ ಮರ್ಯಾದಾ ಪುರುಷೋತ್ತಮ ಶ್ರೀರಾಮ ನಡೆಸಿದ ಆದರ್ಶ, ನ್ಯಾಯ, ತ್ಯಾಗ ಮುಂತಾದ ಮೌಲ್ಯಗಳನ್ನು ಹೊಂದಿರುವ ರಾಜ್ಯ ನಿರ್ಮಾಣ. ಆ ಬಗ್ಗೆ 1947, ಫೆಬ್ರವರಿ 27ರಂದು ಬರೆಯುತ್ತಾ,”ಯಾರೂ ತಪ್ಪಾಗಿ ಭಾವಿಸಬಾರದು, ರಾಮರಾಜ್ಯವೆಂದರೆ ಹಿಂದುಗಳ ಆಡಳಿತವಲ್ಲ. ದೇವರ ಸಾಮ್ರಾಜ್ಯ. ರಾಮನೆಂಬುದು ಖುದಾ ಅಥವಾ ದೇವರ ಇನ್ನೊಂದು ಹೆಸರಷ್ಟೇ. ದೇವರ ಸಾಮ್ರಾಜ್ಯವೆಂದರೆ ದಗಾ, ವಂಚನೆ, ಅನ್ಯಾಯಗಳಿಲ್ಲದ, ಎಲ್ಲರನ್ನೂ ಸಮನಾಗಿ ಕಾಣುವ ಆಡಳಿತ’ ಎನ್ನುತ್ತಾರೆ.
ಈ ಮೇಲಿನ ಮೂರು ಅಂಶಗಳು ಏನನ್ನು ಸೂಚಿಸುತ್ತವೆ? ಹಾಗೂ ಈ ವಿಚಾರಗಳ ಬಗ್ಗೆ ಗಾಂಧಿವಾದಿಗಳು ಎಂದಾದರೂ ಮಾತನಾಡಿದ್ದನ್ನು ಕೇಳಿದ್ದೀರಾ? ಗಾಂಧೀಜಿ ಎಂದರೆ ಬರೀ ಒಬ್ಬ ಸ್ವಾತಂತ್ರ್ಯ ಹೋರಾಟಗಾರ, ಸತ್ಯಾಗ್ರಹಿ, ಬ್ರಿಟಿಷರನ್ನು ದೇಶ ಬಿಡಿಸಿ ಓಡಿಸಿದ ನೇತಾರ ಮಾತ್ರವಾ? ಅಥವಾ ಸ್ವಸ್ಥ ಸಮಾನ ಸಮಾಜ ನಿರ್ಮಾಣದ ಕನಸು ಕಂಡ, ಈ ದೇಶದ ನೆಲ, ಜಲ, ಜೀವಸಂಕುಲಗಳನ್ನು ಪ್ರೀತಿಸಿದ, ಸಂಸ್ಕೃತಿಯನ್ನು ಗೌರವಿಸಿದ, ಅದರ ಸಂರಕ್ಷಣೆ ಮಾಡಬೇಕೆಂದು ಪ್ರತಿಪಾದಿಸಿದ ವ್ಯಕ್ತಿಯೂ ಹೌದಲ್ಲವೆ? ಹಾಗಾದರೆ ಗಾಂಧೀಜಿ ಪ್ರತಿಪಾದಿಸಿದ ಗೋಸಂರಕ್ಷಣೆ, ಮತಾಂತರ ನಿಷೇಧ, ರಾಮರಾಜ್ಯ ನಿರ್ಮಾಣಗಳ ಬಗ್ಗೆ ಮಾತನಾಡಿದರೆ ಇವತ್ತು ಯಾವ ಪಟ್ಟ ಸಿಗುತ್ತದೆ? ಅವರು ಬಲವಾಗಿ ಪ್ರತಿಪಾದಿಸಿದ ವಿಚಾರಗಳ ಬಗ್ಗೆ ಈಗ ಧ್ವನಿಯೆತ್ತಿದರೆ ಯಾವ ಹಣೆಪಟ್ಟಿಯನ್ನು ಅಂಟಿಸುತ್ತಾರೆ? ಒಂದು ಹಂತದಲ್ಲಂತೂ ಗಾಂಧೀಜಿಯವರು ‘Muslims are bullies and Hindus cowards’ ಎಂದು ತಮ್ಮ ಹತಾಶೆಯನ್ನು ಹೊರಹಾಕುತ್ತಾರೆ. ನಾನೊಬ್ಬ ಗಾಂಧಿವಾದಿ ಎಂದು ಕರೆದುಕೊಳ್ಳುವ ಯಾವ ವ್ಯಕ್ತಿಯ ಬಾಯಲ್ಲಿ ಮತಾಂತರದ ಬಗ್ಗೆ ಗಾಂಧೀಜಿ ಯಾವ ಅಭಿಪ್ರಾಯ, ನಿಲುವು ಹೊಂದಿದ್ದರು ಎಂಬ ವಿಚಾರ ಹೊರಬರುತ್ತಿದೆ? ಈ ದೇಶದ ನೆಲ, ಜಲದ ಸಂಸ್ಕೃತಿಯನ್ನು ಉಳಿಸಿಕೊಳ್ಳಬೇಕೆಂದು ಪ್ರತಿಪಾದಿಸಿ, ಮತಾಂತರವನ್ನು ಕಟುವಾಗಿ ಖಂಡಿಸಿದ ಗಾಂಧೀಜಿಯವರ ಮಾತುಗಳನ್ನು ಯಾವ ಗಾಂಧಿ ಟೋಪಿವಾಲಾ ಇಂದು ಉದಾಹರಿಸುತ್ತಾನೆ ಹೇಳಿ?
source: status update in Havyaka of subramanya bhat 
_______________________________________________________________________________________________
ಈ ದೇಶದಲ್ಲಿ ಗಾಂಧೀ ಚಿತ್ರ ಅಂಟಿಸುವುದು ಅಪರಾಧವಾಗಿದ್ದ ಕಾಲವೊಂದಿತ್ತು. ಸದ್ಯಕ್ಕೆ ಭಾರತದಲ್ಲಿ ಅಂತಹ ಪರಿಸ್ಥಿತಿ ಇಲ್ಲದಿರುವುದು ಒಂದು ಕ್ಷೇಮಸಮಾಚಾರ. ಆದರೆ, ಈಗ ಗಾಂಧೀ ಫೋಟೋ ಅಂಟಿಸುವವರೇ ಕಾಣಿಸುತ್ತಿಲ್ಲವೇ! ದೇವರ ಪಟಗಳನ್ನು ಇಡುವುದಕ್ಕೇ ಜಾಗ ಇಲ್ಲದಿರುವಾಗ ಗಾಂಧೀ, ಶಾಸ್ತ್ರೀ ಅವರಿಗೆ ಜಾಗ ಎಲ್ಲಿಂದ ತರೋಣ ಎನ್ನುತ್ತೀರೇನೋ?

* ಮಂಜುನಾಥ ಅಜ್ಜಂಪುರ(ಲೇಖಕರು)

ಜನವರಿ 30 ಬಂದಿತೆಂದರೆ ಮನಸ್ಸು ಭಾರವಾಗಿಬಿಡುತ್ತದೆ. ಅಂತರಂಗದಲ್ಲಿ, ಗಾಂಧೀಜಿ ಅವರ ನುಡಿಗಳ ಧೀಂ ಧೀಂ ರಿಂಗಣ ಆರಂಭವಾಗಿಬಿಡುತ್ತದೆ. ನಿಜ, ನಮ್ಮಂತಹ ಸ್ವಾತಂತ್ರ್ಯೋತ್ತರ ಭಾರತಮಾತೆಯ ತನುಜಾತರಿಗೆ ಸ್ವಾತಂತ್ರ್ಯ ಹೋರಾಟವು ಲೈಬ್ರರಿಗಳ ಧೂಳು ಹಿಡಿದ ಪುಸ್ತಕಗಳ ನಡುವಿನ ಆಕ್ರಂದನ ಮಾತ್ರ. ನಾವು ಹೇಗಿದ್ದೆವು, ಈಗ ಹೇಗಿದ್ದೇವೆ, ನಮ್ಮ ಪರಂಪರೆ ಎಂತಹುದು, ಬ್ರಿಟಿಷರ ಬೂಟುಗಾಲುಗಳ ಅಡಿ ಹುಳುಗಳಿಗಿಂತ ಕಡೆಯಾಗಿ ಬಿದ್ದಿದ್ದೆವೇಕೆ, ಎಂದೆಲ್ಲಾ ಕೇಳಿಕೊಂಡು ಆಸಕ್ತಿ ವಹಿಸಿ ಹಿರಿಯರನ್ನು ಕೇಳಿ, ಅವರ ಸ್ಮೃತಿಚಿತ್ರಗಳನ್ನು ದಾಖಲಿಸಿಕೊಂಡರೆ ಈ ಸ್ವಾತಂತ್ರ್ಯ ಎನ್ನುವುದು ಒಂದಿಷ್ಟು ಅರ್ಥವಾದೀತು. ನಮ್ಮ ಜನರ ಹೋರಾಟದ ಆಯಾಮಗಳನ್ನು ಅರಿಯುವಲ್ಲಿ, ನಮಗೆ ಮುತುವರ್ಜಿ ಇಲ್ಲವೆಂದಾದರೆ ಸ್ವಾತಂತ್ರ್ಯ ದಿನಾಚರಣೆಯು ಬರಿಯ ಒಂದು ನಿರರ್ಥಕ ರಜೆಯೆನಿಸಿಬಿಡುತ್ತದೆ.

ಗಾಂಧೀಜಿ ಮತ್ತು ನೆಹರೂ ಇಬ್ಬರೇ ಈ ಸ್ವಾತಂತ್ರ್ಯ ತಂದುಕೊಟ್ಟರು ; ರಕ್ತಪಾತವಿಲ್ಲದೆ ಹೀಗೆ ಸ್ವಾತಂತ್ರ್ಯ ಗಳಿಸಿದ್ದು ನಮ್ಮ ದೇಶ ಮಾತ್ರ ; ಅಹಿಂಸೆಯೊಂದೇ ಗೆಲುವಿಗೆ ಕಾರಣ, ಇತ್ಯಾದಿ, ಇತ್ಯಾದಿ ವಿಚಾರಗಳ ಪರಿಸರದಲ್ಲಿ ಬೆಳೆದ ನನಗೆ ಭಾರತ ಸ್ವಾತಂತ್ರ್ಯ ಹೋರಾಟದ ವಿಭಿನ್ನ ಧಾರೆಗಳ ಕೊಡುಗೆಯ ಅರಿವಾದುದು ಅನೇಕ ವಿಚಾರವಂತರ ಪರಿಚಯವಾದ ಮೇಲೆ, ಅನೇಕ ಮಹತ್ತ್ವದ ಗ್ರಂಥಗಳನ್ನು ಓದಿದ ನಂತರವೇ. ಈ ನಡುವೆ, 1972ರಲ್ಲಿ ಭಾರತ ಸ್ವಾತಂತ್ರ್ಯದ ಬೆಳ್ಳಿ ವರ್ಷಾಚರಣೆಯ ಸಿದ್ಧತೆ ನಡೆಯಿತು. ನಮ್ಮ ದೊಡ್ಡಪ್ಪ ಓರ್ವ ಸ್ವಾತಂತ್ರ್ಯ ಹೋರಾಟಗಾರರು. ಬ್ರಿಟಿಷರ ಆಡಳಿತದಲ್ಲಿ ಸೆರೆವಾಸವನ್ನೂ ಅನುಭವಿಸಿದವರು. ಮಗ ಮೃತ್ಯುಶಯ್ಯೆಯಲ್ಲಿದ್ದಾಗ, ಕ್ಷಮಾಯಾಚನೆ ಪತ್ರ ಬರೆದುಕೊಟ್ಟು ಬಿಡುಗಡೆ ಆಗಬಹುದಿತ್ತು. ಹಾಗೆ ಮಾಡದ ನಿಜವಾದ ಸತ್ಯಾಗ್ರಹಿ ಅವರು. ಅವರಿಗೆ ಡಾ|| ಸೂರ್ಯನಾಥ ಕಾಮತರು ಪತ್ರ ಬರೆದು ಸ್ವಾತಂತ್ರ್ಯ ಸಂಗ್ರಾಮದ ಸ್ಮೃತಿಗಳನ್ನು ಬರೆದುಕೊಡುವಂತೆ ಕೇಳಿದ್ದರು. ದೊಡ್ಡ ಇತಿಹಾಸಕಾರರೂ, ಲೇಖಕರೂ ಆದ ಕಾಮತರು ಪತ್ರ ಬರೆದುದು ನಮಗೆಲ್ಲಾ ವಿಶೇಷವೆನಿಸಿತ್ತು.

ಮೂವತ್ತರ ದಶಕದಲ್ಲಿಯೇ “ವಿಶ್ವಕರ್ಣಾಟಕ” ಪತ್ರಿಕೆಯ ಪ್ರತಿನಿಧಿಯಾಗಿದ್ದ ಹಾಗೂ ಸ್ವತಃ ಲೇಖಕರೂ ಆಗಿದ್ದ ನಮ್ಮ ತಂದೆ, ನಮ್ಮ ದೊಡ್ಡಪ್ಪನವರ ಸ್ವಾತಂತ್ರ್ಯ ಹೋರಾಟಕ್ಕೆ ಬೆಂಬಲ - ಆಧಾರ ನೀಡಿದಂತಹವರು. ಅವರು ನನ್ನನ್ನು ಕರೆದು, ಇನ್ನುಳಿದ ಸ್ವಾತಂತ್ರ್ಯ ಹೋರಾಟಗಾರರನ್ನು ಸಂದರ್ಶಿಸಿ, ಅವರ ಸ್ಮೃತಿಗಳನ್ನು ದಾಖಲಿಸುವಂತೆ ಹೇಳಿದರು. ಅದು ನನಗೆ ನನ್ನ ಬರವಣಿಗೆಗೆ ದೊರೆತ ಮೊದಲ ಅಸೈನ್ ಮೆಂಟ್. ನಮ್ಮ ದೊಡ್ಡಪ್ಪನವರ ಜೊತೆಗೇ ಸೆರೆವಾಸ ಅನುಭವಿಸಿದ್ದ ಇಬ್ಬರು ಹಿರಿಯರನ್ನು ಕಂಡು ಎರಡು ಲೇಖನಗಳನ್ನು ಸಿದ್ಧಪಡಿಸಿದೆ. ಅವರಲ್ಲಿ ಒಬ್ಬರಿಗೆ ಬರೀ ರುಜು ಹಾಕಲು ಬರುತ್ತಿತ್ತು. ಇನ್ನೊಬ್ಬರಂತೂ ನಿರಕ್ಷರಿ. ನಮ್ಮ ದೊಡ್ಡಪ್ಪನವರ ಸ್ಮೃತಿಗಳೊಂದಿಗೆ, ಈ ಎರಡು ಬರಹಗಳನ್ನೂ ಡಾ|| ಕಾಮತರಿಗೆ ಕಳುಹಿಸಲಾಯಿತು. ಕಾಮತರು ಪತ್ರ ಬರೆದು, “ಬರಹಗಳು ಚೆನ್ನಾಗಿವೆ. ಆದರೆ ಅವುಗಳನ್ನು ಸ್ವತಃ ಆ ಸ್ವಾತಂತ್ರ್ಯ ಹೋರಾಟಗಾರರೇ ಬರೆದಂತೆ ನಿರೂಪಣೆಯನ್ನು ಕೊಂಚ ಬದಲಿಸಿ ಮುದ್ರಿಸುತ್ತೇವೆ.” ಎಂದರು.

ಮೂರೂವರೆ ದಶಕಗಳ ನಂತರ ಆ ಸ್ವಾತಂತ್ರ್ಯ ಹೋರಾಟಗಾರರನ್ನು ನೆನೆದಾಗ ಅಚ್ಚರಿ ಮೂಡುತ್ತದೆ. ಇಂತಹ ಹಳ್ಳಿಯ ಜನರಲ್ಲಿ, ಓದು ಬರಹ ಬಾರದ ಮುಗ್ಧರಲ್ಲಿ, ಸ್ವಾತಂತ್ರ್ಯದ ಬೀಜಗಳನ್ನು ಆ ಗಾಂಧೀಜಿ ಬಿತ್ತಿದ್ದಾದರೂ ಹೇಗೆ? ಇಪ್ಪತ್ತನೆಯ ಶತಮಾನದ ಪೂರ್ವಾರ್ಧದ ಐತಿಹಾಸಿಕ ದಾಖಲೆಗಳು, ಇಂತಹ ಸಾವಿರಾರು ಲಕ್ಷಾವಧಿ ಹೋರಾಟಗಾರರನ್ನು ಪರಿಚಯಿಸುತ್ತದೆ. ನೋಡಲು ಆಕರ್ಷಕವಾಗಿರದಿದ್ದ, ತೀರ ಸಾಧಾರಣ ಕಂಠಶ್ರೀಯ ಆ ಗಾಂಧಿ, ಗುಜರಾತಿನ ಮೂಲೆಯ ಸಬರ್ಮತಿ ಆಶ್ರಮದಲ್ಲಿ ಕುಳಿತು ಕೋಟಿ ಕೋಟಿ ಭಾರತೀಯರಿಗೆ, ಪ್ರೇರಣೆ ನೀಡಿದ್ದಾದರೂ ಹೇಗೆ? ಇಂದಿನ ಆಧುನಿಕ ಸಂವಹನ ಮಾಧ್ಯಮಗಳಿರದ ಆ ಕಾಲಘಟ್ಟದಲ್ಲಿ ಖಾದಿ, ಗ್ರಾಮೋದ್ಧಾರ, ಪಂಚಾಯತ್ ರಾಜ್, ಗೋರಕ್ಷಣೆ, ಸ್ತ್ರೀ ವಿಮೋಚನೆಗಳ ವಿಶಿಷ್ಟ ಯೋಜನೆಗಳನ್ನು ಪ್ರಚುರಪಡಿಸಿದ್ದಾದರೂ ಹೇಗೆ? ನಿಜಕ್ಕೂ ವಿಸ್ಮಯ!

ದುರಂತವೆಂದರೆ ಗಾಂಧೀಜಿಯವರ ಘೋಷಿತ ಉತ್ತರಾಧಿಕಾರಿ ನೆಹರೂ ಆಗಲೀ, ನೆಹರೂ ಅವರ ಅಘೋಷಿತ ಉತ್ತರಾಧಿಕಾರಿ ಇಂದಿರಾ ಆಗಲೀ, ಅವರ ಬಾಲಬಡುಕರಾಗಲೀ, ಗಾಂಧೀ ಪ್ರಣೀತ ಯೋಜನೆಗಳನ್ನು ಅನುಷ್ಠಾನಕ್ಕೆ ತರುವಲ್ಲಿ ಆಸಕ್ತಿ ವಹಿಸಲೇ ಇಲ್ಲ. ಕಾಂಗ್ರೆಸ್ಸಿಗರು ಲೈಸೆನ್ಸ್ ಪರ್ಮಿಟ್ಟುಗಳನ್ನು ನೀಡಿ ದುಡ್ಡು ಮಾಡುವುದು ಹೇಗೆ, ಯೋಜನೆಗಳನ್ನು ಸ್ವಲಾಭಕ್ಕೆ ಬಳಸಿಕೊಳ್ಳುವುದು ಹೇಗೆ, ಎಂಬಂತಹ ಮನುಮುರುಕ ಕ್ಷಮಿಸಿ ದೇಶಮುರುಕ ವಿದ್ಯೆಗಳಲ್ಲಿ ಮುಳುಗಿದರು. ಭ್ರಷ್ಟಾಚಾರ, ಹಣದುಬ್ಬರ, ಬೆಲೆಯೇರಿಕೆಗಳು ಜನರನ್ನು ಕಂಗೆಡಿಸಿ ಹತಾಶೆಯತ್ತ ತಳ್ಳಿದವು. 1974ರ ಹೊತ್ತಿಗೆ ಅರಾಜಕತೆಯ ಸ್ಥಿತಿ ತಾಂಡವವಾಡುತ್ತಿತ್ತು. ರಾಜಕೀಯದಿಂದ ದೂರವುಳಿದಿದ್ದ ಜಯಪ್ರಕಾಶ ನಾರಾಯಣರಂತಹವರು, ದೇಶವನ್ನು ಉಳಿಸಲು ಪ್ರತಿಭಟನೆಯ ಸತ್ಯಾಗ್ರಹದ ನೇತೃತ್ವ ವಹಿಸಬೇಕಾಯಿತು.

ತಮ್ಮ ಅಧಿಕಾರ ಉಳಿಸಿಕೊಳ್ಳಲು ಯಾವ ಮಟ್ಟಕ್ಕೆ ಬೇಕಾದರೂ ಇಳಿಯಲು ಸಿದ್ಧರಾದ ಇಂದಿರಾ ಗಾಂಧಿಯವರು 1975ರಲ್ಲಿ ತುರ್ತುಪರಿಸ್ಥಿತಿ ಹೇರಿದರು. ವಾಕ್ ಸ್ವಾತಂತ್ರ್ಯ, ಪತ್ರಿಕಾ ಸ್ವಾತಂತ್ರ್ಯಗಳ ಹರಣವಾಯಿತು. ಆ ವರ್ಷದ ಗಾಂಧೀಜಯಂತಿ ಒಂದು ವಿಶೇಷ ಸಂದೇಶ ಹೊತ್ತು ತಂದಿತು. ಆದರೆ ಆ ಸಂದೇಶವು, ಸರಕಾರದ ಕಾರ್ಯಕ್ರಮಗಳ ಭಾಗವಾಗಿ ಮೂಡಿಬಂದಿರಲಿಲ್ಲ. ಆ ದಿನಗಳಲ್ಲಿ ಗಾಂಧೀ ಜಯಂತಿ ಆಚರಿಸಿದವರು ಭೂಗತ ಕಾರ್ಯಕರ್ತರು. ಎದೆಯ ಮೇಲೆ ಧರಿಸಲು ಗಾಂಧೀ ಬಿಲ್ಲೆಗಳು, ಗೋಡೆಗಳನ್ನು ಅಲಂಕರಿಸಲು ಗಾಂಧೀ ಭಿತ್ತಿಚಿತ್ರಗಳು. ಎರಡರಲ್ಲೂ ಗಾಂಧೀ ಚಿತ್ರದ ಕೆಳಗೆ, “ಅಸತ್ಯ, ಅನ್ಯಾಯ, ದಬ್ಬಾಳಿಕೆಗಳಿಗೆ ತಲೆ ಬಾಗುವುದು ಹೇಡಿತನ”, ಎನ್ನುವ ಗಾಂಧೀ ಉಕ್ತಿ. ಆದರೆ ಅಂದಿನ ಇಂದಿರಾ ದೇವರಾಜ ಅರಸು ಅವರ ಕಾಂಗ್ರೆಸ್ ಸರಕಾರಗಳಿಗೆ ಗಾಂಧಿಯ ಚಿತ್ರ, ಗಾಂಧಿಯ ಉಕ್ತಿ, ಗಾಂಧಿಯ ನೆನಪು ಎಲ್ಲಾ ನಿಷಿದ್ಧವಾಗಿತ್ತು.

ಗಾಂಧೀ ಭಿತ್ತಿಪತ್ರ ಅಂಟಿಸುತ್ತಿದ್ದ ಹಲವಾರು ಜನರನ್ನು ಪೋಲೀಸರು ಬಂಧಿಸಿದರು. ಅಹಿಂಸೆ, ಅಹಿಂಸೆ ಎಂದ ಆ ಮಹಾಮಹಿಮನ ಚಿತ್ರ ಹಿಡಿದಿದ್ದಕ್ಕೆ ಪೋಲೀಸರು ಬಡಿದರು, ಹೊಡೆದರು, ತುಳಿದರು. ಹಲವೆಡೆ ಸತ್ಯಾಗ್ರಹಿಗಳನ್ನು ಬಂಧಿಸಿ, ಅವರ ಮೇಲೆ ಮೊಕದ್ದಮೆ ಹೂಡಲಾಯಿತು. ಆಪಾದಿತರನ್ನು ಪೋಲೀಸರ ನ್ಯಾಯಾಧೀಶರ ಮುಂದೆ ತಂದು ನಿಲ್ಲಿಸಿದಾಗ ನ್ಯಾಯಾಧೀಶರು ತಮ್ಮ ಕಣ್ಣು ಕಿವಿಗಳನ್ನು ನಂಬದಾದರು. “ಏನು, ಈ ದೇಶದಲ್ಲಿ ಗಾಂಧೀ ಚಿತ್ರ ಅಂಟಿಸುವುದು ಕ್ರಿಮಿನಲ್ ಅಪರಾಧವಾಯಿತೇ?” ಎಂದು ಪ್ರಶ್ನಿಸಿದರು. ಇದಕ್ಕೆ ಪೊಲೀಸರು ಏನು ಹೇಳಿಯಾರು! “ಇವರೆಲ್ಲಾ ಆರೆಸ್ಸೆಸ್ ಕಾರ್ಯಕರ್ತರು”, ಎಂಬ ನೆಪ ಹೇಳಿದರು. “ಇರಬಹುದು, ಆದರೆ ಇವರು ಮಾಡಿದ ಅಪರಾಧವಾದರೂ ಏನು?” ಎಂದ ನ್ಯಾಯಾಧೀಶರ ಪ್ರಶ್ನೆಗಳಿಗೆ ಪೊಲೀಸರು ನಿರುತ್ತರರಾದರು. ನ್ಯಾಯಾಧೀಶರು ಪೊಲೀಸರಿಗೆ ಛೀಮಾರಿ ಹಾಕಿ ಬಂಧಿತರನ್ನು ಬಿಡುಗಡೆ ಮಾಡಿದರು.

ದೊಡ್ಡ ಗಾಂಧೀವಾದಿ ಪ್ಯಾರೇಲಾಲರು “Mahatma Gandhi : The Last Phase”, ಎನ್ನುವ ಬೃಹತ್ ಗ್ರಂಥ ರಚಿಸಿದ್ದಾರೆ. ಅದನ್ನು ಗಾಂಧೀವಾದಿ ದಿ|| ಕೆ.ವಿ.ಶಂಕರೇಗೌಡರು “ಮಹಾತ್ಮಾ ಗಾಂಧಿ : ಅಂತಿಮ ಹಂತ”, ಎಂದು ಅನುವಾದಿಸಿದ್ದಾರೆ. ಮೈಸೂರು ವಿಶ್ವವಿದ್ಯಾಲಯವು ಹೊರತಂದಿರುವ ಈ ಸಂಪುಟಗಳು ಓದಲೇಬೇಕಾದ ಅಪೂರ್ವ ಮಾಹಿತಿಗಳನ್ನು ದಾಖಲೆಗಳನ್ನು ಸಂಗತಿಗಳನ್ನು ಒಳಗೊಂಡಿದೆ.

“ವಿಧಾನ ಪರಿಷತ್ತು ಮತ್ತು ವಿಧಾನಸಭೆಯ ಸದಸ್ಯರನೇಕರು, “ಗಾಳಿ ಬಂದಾಗ ತೂರಿಕೋ”, ಎನ್ನುವ ರೀತಿಯಲ್ಲಿ ಹಣ ಮಾಡಲು ಹೊರಟಿದ್ದಾರೆ. ಕಾಂಗ್ರೆಸ್ಸಿನಲ್ಲಿ ತಲೆದೋರಿರುವ ಗುಂಪುಗಾರಿಕೆ ಮತ್ತು ಮಂತ್ರಿಗಳ ದೌರ್ಬಲ್ಯ ಕಂಡ ಜನರಲ್ಲಿ ಒಂದು ಬಗೆಯ ದಂಗೆಯ ಮನೋಭಾವ ಮೂಡುತ್ತಿದೆ. ಜನರು ಬ್ರಿಟಿಷ್ ಸರಕಾರವೇ ವಾಸಿಯಾಗಿತ್ತು ಎನ್ನುತ್ತಿದ್ದಾರಲ್ಲದೆ, ಕಾಂಗ್ರೆಸ್ಸನ್ನು ಹಳಿಯುತ್ತಿದ್ದಾರೆ. ಡಿಸೆಂಬರ್ 1947ರಲ್ಲಿ, ಮತ್ತೆ ಗಾಂಧೀಜಿ ಹೇಳಿದರು, “ಕಾಂಗ್ರೆಸ್ಸಿನಂತಹ ಬೃಹತ್ ಸಂಸ್ಥೆಗಳಿಂದ ಭ್ರಷ್ಟಾಚಾರ, ಅಸತ್ಯ, ಮುಂತಾದ ಪೀಡೆಗಳನ್ನು ಉಚ್ಚಾಟಿಸದೇ ಹೋದರೆ, ನಾಲ್ಕೂ ಕಡೆಯಿಂದ ಸ್ವಾರ್ಥಿಗಳು ಕಾಂಗ್ರೆಸ್ಸನ್ನು ಮುತ್ತಿ, ಈ ಸಂಸ್ಥೆ ಧೂಳೀಪಟವಾಗುತ್ತದೆ ಮತ್ತು ಹಾಗಾದಾಗ ಒಂದು ತೊಟ್ಟು ಕಣ್ಣೀರನ್ನೂ ನಾನು ಸುರಿಸುವುದಿಲ್ಲ. ದೊಡ್ಡ ರೋಗದಿಂದ ಬಳಲುತ್ತಿರುವ ರೋಗಿಯನ್ನು ಗುಣಮಾಡಲು ಸಾಧ್ಯವಿಲ್ಲದೇ ಹೋದರೆ, ರೋಗಿ ಸಾಯುವುದು ಮೇಲು”. (ಪುಟ 721)

ಈ ಹಿನ್ನೆಲೆಯಲ್ಲಿ, ಸ್ವಾತಂತ್ರ್ಯದ ಪರಿಕಲ್ಪನೆಯ ಮೂಲದ್ರವ್ಯವು ನಮ್ಮಲ್ಲಿ ಅರ್ಥಪೂರ್ಣ ವಿಚಾರಗಳನ್ನು ಹೊಮ್ಮಿಸಲಿ, ಇತಿಹಾಸ, ಗಾಂಧೀಜಿ, ಸ್ವಾತಂತ್ರ್ಯ ಹೋರಾಟಗಾರರು ಮತ್ತೊಮ್ಮೆ ನಮ್ಮ ಮೇಲೆ ಬೆಳಕು ಚೆಲ್ಲಲಿ, ನಮ್ಮನ್ನು ಕವಿದಿರುವ ಕತ್ತಲನ್ನು ನೀಗಲಿ. ಅಂದಹಾಗೆ, ನಿಮ್ಮ ಮನೆಯಲ್ಲಿ ಗಾಂಧೀತಾತನ ಭಾವಚಿತ್ರ ಉಂಟಾ?
______________________________________________________________________________________________
ಮಹಾತ್ಮ ಗಾಂಧಿ

“ರಕ್ತ ಮಾಂಸಗಳು ತುಂಬಿದ ಇಂಥಹ ಒಬ್ಬ ಮಾನವ ಈ ಲೋಕದಲ್ಲಿ ನಡೆದಾಡಿದ್ದ ಎಂದರೆ ಮುಂಬರುವ ಜನಾಂಗಗಳು ಅಚ್ಚರಿ ಪಡುತ್ತವೆ” ಎಂದು ಆಲ್ಬರ್ಟ್ ಐನ್ಸ್ಟೈನ್ ಅವರು ಮಹಾತ್ಮರನ್ನು ವರ್ಣಿಸಿದ ಮಾತುಗಳು ನಮ್ಮ ಭಾರತೀಯ ಮನಗಳನ್ನು ಅದಮ್ಯವಾಗಿ ಆವರಿಸಿಕೊಂಡು ಬಿಟ್ಟಿದೆ. ನಮಗೆ ಆಲ್ಬರ್ಟ್ ಐನ್ ಸ್ಟೈನ್ ಹೆಸರು ಗೊತ್ತು. ಅವರು ವಿಜ್ಞಾನಿ ಎಂದು ಗೊತ್ತು. ಆದರೆ ಅವರ ವಿಜ್ಞಾನ ತತ್ವ ಗೊತ್ತಿಲ್ಲ. ಅವರು ನಾವು ಹೇಳುವ ದೇವರ ಅಸ್ತಿತ್ವವನ್ನು ನಂಬುತ್ತಿರಲಿಲ್ಲ ಎಂಬುದು ಗೊತ್ತು. ಆದರೆ ಅವರು ಈ ಮಹಾತ್ಮನ ಮಹತ್ವವನ್ನು ಸುಸ್ಪಷ್ಟವಾಗಿ ಗುರುತಿಸಿದ್ದರು. ಐನ್ ಸ್ಟೈನ್ ಒಬ್ಬ ಮಹಾನ್ ವಿಜ್ಞಾನಿ. ಅವರಿಗೆ ಸತ್ಯ ಎಂಬುದು ಗೊತ್ತಿತ್ತು. ಹಾಗಾಗಿ ಅವರಿಗೆ ಮತ್ತೊಬ್ಬ ವಿಜ್ಞಾನಿಯ ಬಗ್ಗೆ ಅರ್ಥವಾಗುತ್ತಿತ್ತು. ಗಾಂಧೀಜಿ ಸತ್ಯ ಸಂಶೋಧನೆಯ ವಿಚಾರದಲ್ಲಿ ವಿಜ್ಞಾನಿಯ ನಿಷ್ಠೆಯಲ್ಲಿ ತಪಸ್ಸನ್ನಾಚರಿಸಿದವರು. ಹೀಗೆಂದ ಮಾತ್ರಕ್ಕೆ ನಮಗೆ ಗಾಂಧೀಜಿ ಗೊತ್ತು ಎಂದು ಹೇಳುವಂತಿಲ್ಲ. “ನಮಗೆ ಗಾಂಧೀಜಿ ಅವರ ಹೆಸರು ಗೊತ್ತು. ಅವರು ಮಹಾತ್ಮರು ಎಂದು ಎಲ್ಲರೂ ಹೇಳುವುದು ಗೊತ್ತು. ನಮಗೆ ಅಷ್ಟೊಂದು ದೇವರುಗಳ ಹೆಸರುಗಳು ಗೊತ್ತಿರುವ ಹಾಗೆ!”

“Be the change you want to see in others” ಎಂಬ ಮಹಾತ್ಮರ ನುಡಿಯನ್ನು ಕನ್ನಡದಲ್ಲಿ ಮೂಡಿಸುವ ಆಸೆ ಆಗುತ್ತದೆ. ಆದರೆ ಅದೇಕೋ ಪ್ರತೀ ಬಾರೀ ಸೋತ ಅನುಭವವಾಗುತ್ತದೆ. ನಾವು ಪದಗಳ ಮೋಹದಲ್ಲಿ ಸಿಲುಕಿದಾಗ ನಮ್ಮ ಆಂತರ್ಯದ ಬದಲಾವಣೆ ಆಗುವುದಾದರೂ ಹೇಗೆ. ಬದಲಾವಣೆ ನಾನಾಗಬೇಕು. ಮತ್ತೆ ಅದೇ ಪ್ರಶ್ನೆ ನಾನು ಅಂದರೆ. ಬಹುಷಃ ನನ್ನಲ್ಲಿ ‘ನಾನು’ ಎಂಬುದಿಲ್ಲದ ಒಂದು ಬದಲಾವಣೆಯನ್ನು ಆಗಗೊಡಬೇಕು. ಸ್ವಾಮಿ ವಿವೇಕಾನಂದರು ಹೇಳುವ ಹಾಗೆ “ನೀನು ನಿನ್ನಲ್ಲಿ ನಿಶ್ಚಿಂತನಾಗಿ ವಿರಮಿಸು. ಮಾಡುವುದೆಲ್ಲಾ ಆ ಪರಮಾತ್ಮನಿಗೆ ಸೇರಿದ್ದು”. ಆದರೆ ಇಲ್ಲಿ ಮುಖ್ಯವಾದದ್ದು ಅವರು ‘ನೀನು’ ಎಂದು ಸಂಬೋಧಿಸುತ್ತಿರುವ ‘ನಾನು’ವನ್ನು ಅರ್ಥೈಸುವುದು!

ನಮಗೆ ಬದುಕಿನಲ್ಲಿ ಅತ್ಯಂತ ಕಷ್ಟವಾದದ್ದು ನಮ್ಮನ್ನು ನಾವು ಅವಲೋಕಿಸಿಕೊಳ್ಳುವುದು. ಉದಾಹರಣೆಗೆ ನಾವೇನು ಖರ್ಚು ಮಾಡುತ್ತಿದ್ದೇವೆ ಎಂದು ಬರೆಯಲು ಪ್ರಯತ್ನಿಸಿದವರೆಲ್ಲಾ ಅದನ್ನು ಬರೆಯಲಿಕ್ಕೆ ಪ್ರಾರಂಭಿಸಿದ ಒಂದೆರಡು ದಿನದಲ್ಲಿ ಅದರ ಬಗ್ಗೆ ತಲೆ ಕೆಟ್ಟು ಹೋಗಿ ಕೈ ಬಿಟ್ಟು ಬಿಡುತ್ತೇವೆ. ನಾವು ನಮ್ಮ ಬಗ್ಗೆ ಡೈರಿ ಬರೆಯಬೇಕು ಎಂದು ಹೋದಾಗಲೆಲ್ಲಾ ಅದು ನಾವು ಓದಿದ ಯಾವುದೋ ಶೈಲಿಯ ಹಾದಿ ಹಿಡಿದು ಸತ್ಯಬಿಟ್ಟು ಉಳಿದೆಲ್ಲವೂ ಆಗತೊಡಗಿ ಯಾವುದೋ ಅರ್ಥವಿಲ್ಲದ ಕಥೆ ಓದಿದ ಅನುಭವವಾಗಿ ಆ ಪ್ರಯತ್ನ ತಣ್ಣಗೆ ನಿಂತು ಹೋಗಿ ನಮ್ಮ ಡೈರಿಯ ಬಹುತೇಕ ಪುಟಗಳು ಖಾಲಿಯಾಗಿ ಉಳಿದುಬಿಡುತ್ತವೆ. “ಸರಳತೆ ಎಂಬ ಮುಕ್ತತೆ ತುಂಬಾ ಮುದವಾದದ್ದು. ಆದರೆ ಸರಳತೆ ಎಂಬ ಸಾಮಾನ್ಯತೆಯಿಂದ ನಾವು ಬಹುದೂರ ಸಾಗಿಬಿಟ್ಟಿದ್ದೇವೆ. ಅದರ ಬಳಿ ಉಳಿದವರು ಮಾತ್ರವೇ ಮಹಾತ್ಮರು. ಮಿಕ್ಕವರೆಲ್ಲಾ ಬರೀ ಉಳಿದವರು ”. 

ಮಹಾತ್ಮರ ಸಾಧನೆಯಿರುವುದು ಅವರು ವ್ಯವಸ್ಥೆಗಳ ಒಡನೆ ಮಾಡಿದ ಹೋರಾಟದಲ್ಲಿಲ್ಲ. ಅವರು ತಮ್ಮನ್ನು ತಾವು ಕಂಡುಕೊಳ್ಳುವ ಪ್ರಯತ್ನದಲ್ಲಿದೆ. ತಮ್ಮ ತಪ್ಪುಗಳನ್ನು ಮುಕ್ತವಾಗಿರಿಸಿಕೊಳ್ಳಲು ಅವರಿಗೆ ಮುಜುಗರವೆನಿಸಲಿಲ್ಲ. ಅದರ ಪರಿಣಾಮಗಳನ್ನು ಎದುರಿಸಲಿಕ್ಕೆ ಅವರಲ್ಲಿ ಸಿದ್ಧತೆ ಇತ್ತು. ಒಂದೆಡೆ ಅವರ ಮಾತು ನೆನಪಾಗುತ್ತದೆ. “ಕ್ಷಮಿಸುವವನೇ ಧೀರ”. ಕ್ಷಮಿಸುವವ ಹೇಗೆ ಧೀರನಾಗುತ್ತಾನೆ. ನಮ್ಮನ್ನು ನಾವು ಅರ್ಥ ಮಾಡಿಕೊಂಡಾಗ ಇತರರ ತಪ್ಪು ನಮಗೆ ದೊಡ್ಡದೆನಿಸುವುದಿಲ್ಲ. ಇತರರು ತಪ್ಪು ಮಾಡಿದಾಗ ಕೂಡಾ ಅದರಿಂದ ನಾವು ಕಲಿಯುತ್ತಾ ಹೋಗುತ್ತೇವೆ. ಗಾಂಧಿ ಎಂಬ ವ್ಯಕ್ತಿ ಗಾಂಧೀಜಿ ಆಗಿದ್ದು, ಗಾಂಧೀಜಿ ಎಂಬ ಹಿರಿಯರು ಮಾಹಾತ್ಮರಾಗಿ ಏರಿದ ಮೆಟ್ಟಿಲುಗಳು ಇಲ್ಲಿವೆ ಎನಿಸುತ್ತದೆ.

ಗಾಂಧೀಜಿ ಅವರ ಕಾರ್ಮಿಕ ಪರ ಹೋರಾಟದ ಒಂದು ಘಟನೆ ನನ್ನ ಮನಸ್ಸನ್ನು ತೀವ್ರವಾಗಿ ಆವರಿಸಿದೆ. ಅಹಮದಾಬಾದಿನ ಗಿರಣಿಯ ಕಾರ್ಮಿಕರ ಮೂಲಭೂತ ಅವಶ್ಯಕತೆಗಳ ಬೇಡಿಕೆಯ ಹೋರಾಟಕ್ಕೆ ಗಾಧೀಜಿ ಮುಂದಾಳತ್ವ ವಹಿಸಲು ಒಪ್ಪಿದರು. ಕಾರ್ಮಿಕರು ಕೆಲಸವನ್ನೂ ಬಹಿಷ್ಕರಿಸಿದರು. ಏನೇನೋ ಉಪಯೋಗ ಕಾಣಲಿಲ್ಲ. ಆಡಳಿತ ವರ್ಗ ಕೆಲವೊಂದು ದುರ್ಬಲ ಮನಸ್ಸಿನ ಕಾರ್ಮಿಕರನ್ನು ಪುಸಲಾಯಿಸಿ ಕಾರ್ಮಿಕ ವರ್ಗದಲ್ಲಿ ಒಡಕು ಮೂಡಿಸಲು ಯತ್ನಿಸಿದರು. ಆಗ ಗಾಂಧೀಜಿ ಮಾಡಿದ ಕೆಲಸ ನೋಡಿ. ಅವರು ಆಡಳಿತ ವರ್ಗವನ್ನು ದೂಷಿಸಲಿಲ್ಲ. ಒಡೆದ ಕಾರ್ಮಿಕರನ್ನೂ ದೂಷಿಸ ಹೋಗಲಿಲ್ಲ. ಕಾರ್ಮಿಕರನ್ನು ಉದ್ದೇಶಿಸಿ ಹೇಳಿದರು, “ನೀವೆಲ್ಲಾ ಒಟ್ಟಾಗುವವರೆಗೆ ನಾನು ನಿರಂತರ ಉಪವಾಸ ಮಾಡುತ್ತೇನೆ” ಎಂದು ಉಪವಾಸ ಕೂತರು. ಒಂದೆರಡು ದಿನದಲ್ಲಿ ಕಾರ್ಮಿಕರೆಲ್ಲಾ ಮೂಕವಾದರು. ಆ ಮೂಕತನದಲ್ಲಿ ಅವರೆಲ್ಲಾ ತಮ್ಮಲ್ಲಿನ ತಮವನ್ನು ಕಳೆದುಕೊಂಡು ಒಂದಾಗಿ ಹೋದರು. ಅಹಮದಾಬಾದಿನ ಗಿರಣಿಯ ಮಾಲೀಕರು, ಗಾಂಧೀಜಿಯವರ ಬಳಿ ಬಂದು ಮಹಾತ್ಮರೇ ನಿಮ್ಮ ಕಾರ್ಮಿಕರ ಪರವಾಗಿನ ಎಲ್ಲಾ ಬೇಡಿಕೆಗಳನ್ನೂ ನಾವು ಭೇಷರತ್ತಾಗಿ ಒಪ್ಪಿದ್ದೇವೆ ಎಂದು ಮಹಾತ್ಮರಿಗೆ ಶರಣಾದರು. 

ಗಾಂಧೀಜಿಯವರ ಬ್ರಿಟಿಷರ ವಿರುದ್ಧದ ಹೋರಾಟವನ್ನೇ ಗಮನಿಸೋಣ. ಅವರು ವ್ಯಕ್ತಿಗತವಾಗಿ ಮಾಡಿದ ಟೀಕೆಗಳು ಯಾವ ಗ್ರಂಥಗಳನ್ನು ಜಾಲಾಡಿದರೂ ಸಿಗಲಾರವೇನೋ. ಅವರನ್ನು ಕೋರ್ಟಿನಲ್ಲಿ ಕಟಕಟೆಯಲ್ಲಿ ನಿಲ್ಲಿಸಿದಾಗ ಹಲವಾರು ಬ್ರಿಟಿಷ್ ನ್ಯಾಯಾದೀಶರು ತಮ್ಮ ಸ್ಥಾನದಿಂದ ಎದ್ದು ಗೌರವ ಸಲ್ಲಿಸುತ್ತಿದ್ದರು. ಅವರನ್ನು ಬಂಧಿಸಿದ್ದ ಹಲವಾರು ಜೈಲರುಗಳು ನಮ್ಮ ಬಳಿ ಒಬ್ಬ ಮಹಾತ್ಮನಿದ್ದಾನೆ ಎಂಬ ಪೂಜ್ಯಭಾವ ತಳೆದಿದ್ದರು. ಬ್ರಿಟಿಷರ ಮಧ್ಯದಲ್ಲಿ ಅವರ ಕಾಲದಲ್ಲಿ ಬ್ರಿಟಿಷ್ ಜನಾಂಗದ ಮನದಾಳವನ್ನು ಗಾಂಧೀಜಿ ಅವರಂತೆ ಹೊಕ್ಕ ಮತ್ತೊಬ್ಬ ಸಮಕಾಲೀನನಿರಲಿಲ್ಲ. ಕಡೆಗೆ ಗಾಂಧೀ ಎಂಬ ಚಿತ್ರವನ್ನು ಅದ್ಭುತವಾಗಿ ಮಾಡಿ ವಿಶ್ವದೆಲ್ಲೆಡೆ ಗಾಂಧೀಜಿ ಅಂದರೆ ಏನೆಂದು ಜನಸಾಮಾನ್ಯನ ಮನದಲ್ಲಿ ಒಂದು ಸ್ವರೂಪ ಕೊಟ್ಟವನೂ ಬ್ರಿಟಿಷನೇ. ನಾವು ಯಾರ ಒಡನೆ ಹೋರಾಡುತ್ತೆವೆಯೋ ಅವರ ಮನದಲ್ಲೇ ಹೀಗೆ ಕುಳಿತುಕೊಳ್ಳುವ ರೀತಿ ಹಿಂದೆ ಆಗಿರದಿದ್ದುದು, ಇದು ಆತ್ಮ ಜಾಗೃತಿಯನ್ನು ಹೊಂದಿದ ಒಬ್ಬ ಮಹಾತ್ಮ ಜಗತ್ತನ್ನು ಆಳುವ ಪರಿ. 

ಸಹಸ್ರಾರು ವರ್ಷಗಳ ಕಾಲ ಭಾರತ ಎಂಬುದು ಒಡೆದ ಗೂಡಾಗಿ ಛಿದ್ರ ಛಿದ್ರವಾಗಿದ್ದುದು ಚರಿತ್ರೆಯನ್ನು ಬಲ್ಲ ನಮಗೆಲ್ಲಾ ಅರಿಯದ ವಿಚಾರವಲ್ಲ. ಇಂದೂ ಕೂಡಾ ಹಲವು ಭಾಷೆ, ಹಲವು ಪರಿಯಲ್ಲಿ ನಾವು ಬೇರೆ ಬೇರೆಯಾಗಿಯೇ ಮತ್ತು ನೂರಾರು ವಿಷಯಗಳಲ್ಲಿ ಬಹಳಷ್ಟು ಛಿದ್ರ ಛಿದ್ರವಾಗಿಯೇ ಇದ್ದೇವೆ. ಇವೆಲ್ಲವುಗಳನ್ನೂ ಯಾವುದೇ ಬೇಲಿಗಳ ಪರಿಧಿಯ ಅಂಚಿಲ್ಲದೆ ಒಂದುಗೂಡಿಸಿದ ಮಹನೀಯತೆ ಮಹಾತ್ಮರದ್ದು. ತನ್ನನ್ನು ತಾನು ಕಂಡ ಮಹಾತ್ಮ ತನ್ನನ್ನು ಎಲ್ಲೆಲ್ಲಿಯೂ ಕಾಣಿಸುತ್ತಾನೆ. ರಾಮಾಯಣದಲ್ಲಿ ರಾಮ ಹೀಗೆ ಮಾಡಿದ್ದ ದೃಷ್ಟಾಂತವಿದೆ. ರಾಮ ಯುದ್ಧ ಮಾಡುವಾಗ ಆತನ ವಿರುದ್ಧ ಯುದ್ಧ ಮಾಡುತ್ತಿದ್ದವರಿಗೆ ತಮ್ಮ ಸಹಚರರೆಲ್ಲಾ ರಾಮನಾಗೇ ಕಂಡುಬಿಡುತ್ತಿದ್ದರಂತೆ. ಹಾಗೆ ಕಂಡಾಗ ತಮೋ ಗುಣಿಗಳಾದ ರಕ್ಕಸರು ಇಗೋ ರಾಮ ಹೊಡಿ ಎಂದು ತಮ್ಮ ತಮ್ಮನ್ನೇ ಬಡಿದುಕೊಳ್ಳುತ್ತಿದ್ದರು. ಗುಣಾತೀತರಾದವರು ತಮ್ಮಲ್ಲೇ ರಾಮನನ್ನೂ ಗುರುತಿಸಿಕೊಳ್ಳುತ್ತಿದ್ದರು. ಗಾಂಧೀಜಿಯವರ ವಿಚಾರದಲ್ಲಿ ಗಮನಿಸಿದರೂ ನಾವು ಕಾಣುವುದು ಇದೇ ಪುನರಾವರ್ತನೆಯನ್ನೇ. ಆದರೆ ನಾವು ಗುಣಾತೀತರಾಗಿದ್ದೇವೆಯೇ ಎಂಬುದು ನಮ್ಮನ್ನು ನಾವೇ ಅರ್ಥೈಸಿಕೊಂಡು, ಇಲ್ಲವೇ ಗಮನಿಸಿಕೊಂಡು ಬಾಳಿ ನೋಡುವುದು ನಮ ನಮಗೆ ಬಿಟ್ಟಿದ್ದು. 

ರಾಮಾಯಣದಲ್ಲಿ ಶ್ರೀರಾಮ ಹೇಳುತ್ತಾರೆ. “ಆತ್ಮಾನಾಂಮಾನುಷಂಮನ್ಯೇ ರಾಮಂ ದಶರಥಾತ್ಮಜಂ”. ನಾನು ದಶರಥನ ಮಗ, ಸಾಮಾನ್ಯ ಮನುಷ್ಯ ರಾಮ ಎಂಬರ್ಥದಲ್ಲಿ. ಗಾಂಧೀಜಿ ತಮ್ಮನ್ನು ತಾವು ಅತೀ ಸಾಮಾನ್ಯರನ್ನಾಗಿ ಗುರುತಿಸಿಕೊಂಡಿದ್ದರು. ಅವರು ಯಾವುದೇ ಜನಪ್ರಿಯತೆಗೂ ಮಾರುಹೋಗಿರಲಿಲ್ಲ. ತಾವು ಹೇಳಿದ್ದೇ ಅಂತಿಮವಲ್ಲ ಎಂದು ಎಲ್ಲೆಡೆ ಪುನರುಚ್ಚರಿಸಿದರು. ನಾನೂ ತಪ್ಪು ಮಾಡುತ್ತೇನೆ. ಅದೂ ನನ್ನ ಒಂದು ಭಾಗ ಎಂದು ಹೇಳಲು ಅವರಿಗೆ ಯಾವ ಹಿಂಜರಿಕೆಯೂ ಇರಲಿಲ್ಲ. ಆದರೆ ಬದುಕಿನ ವಿಚಾರದಲ್ಲಿ ತಾವು ನಂಬಿದ್ದರ ಆಚೆ ಈಚೆ ಕದಲಲಿಲ್ಲ. ನಾನು ಹೇಳಿದ್ದನ್ನು ಉದಾಹರಣೆಯಾಗಿ ಸ್ವೀಕರಿಸಿ, ನಿಮ್ಮ ನಿಮ್ಮ ಸಂಶೋಧನೆಯ ಆಳದಲ್ಲಿ ನಿಮ್ಮನ್ನು ಕಂಡುಕೊಂಡು ಬಾಳಿರಿ ಎಂದವರು. 

ನಾವೋ ಎಲ್ಲವನ್ನೂ ರೆಡೀಮೇಡ್ ಬಯಸುತ್ತಾ ನಮ್ಮ ದೇವರುಗಳನ್ನೆಲ್ಲಾ ಕಲ್ಲು ಮಾಡಿ ಮಹಾತ್ಮರನ್ನೆಲ್ಲಾ ಫೋಟೋಗಳಲ್ಲಿ, quotationಗಳಲ್ಲಿ ಮಲಗಿಸಿಬಿಟ್ಟು ಅಕ್ಟೋಬರ್ ಎರಡರಂದು “ಬೋಲೋ ಮಹಾತ್ಮಾ ಗಾಂಧೀಜಿ ಕಿ ಜಯ್” ಎನ್ನುವ ಪರಿಪಾಠದಲ್ಲಿ ನಿಶ್ಚಿಂತರಾಗಿ ನಮ್ಮ ಎಡಬಿಡದ ಚಿಂತೆಗಳಲ್ಲಿ ಕಳೆದು ಹೋಗಿದ್ದೇವೆ. 

ಗಾಂಧೀಜಿ ಎಂಬ ಒಂದು ಯುಗ ಒಬ್ಬ ವ್ಯಕ್ತಿಯಿಂದ ಆರಂಭವಾಗಿ ಆ ವ್ಯಕ್ತಿಯೊಡನೆಯೇ ಅಂತ್ಯವಾಗಿ ಹೋಗಿ ನಾವು ಹುಟ್ಟುವ ಮುಂಚೆಯೇ ಆಗಿ ಹೋದ ಒಂದು ಕಾಲವಾಗಿದ್ದು ಅಂತಹ ಅಮೂಲ್ಯ ಘಳಿಗೆ ನಮ್ಮ ಜೀವನದಲ್ಲೂ ಫಲಿಸೀತೇ ಎಂದು ಕಾದು ನೋಡುವ ನಿರೀಕ್ಷೆ ಮಾತ್ರ ನಮ್ಮದಾಗಿದೆ. ಈ ನಿರೀಕ್ಷೆಯ ಹಾದಿಯಲ್ಲಿ ನಾವು ನಮ್ಮೊಳಗಿನ ಆಳದಲ್ಲಿರುವ ಆ ಮಹತತ್ವವನ್ನು ಅರಸಿದಲ್ಲಿ, ಆ ಮಹಾತ್ಮ ನಮ್ಮ ಮುಂದೆ ಬಂದು ನಿಂತರೂ ನಿಂತಾನು. ಅಂತದ್ದಕ್ಕೆ ನಮ್ಮನ್ನು ಪ್ರಯತ್ನಶೀಲವಾಗಿಸು ಎಂದು ಆ ಪರಮನಲ್ಲಿ ಪ್ರಾರ್ಥಿಸೋಣ.

Comments

Popular Posts