ಕನ್ನಡ ಸಂಸ್ಕೃತಿ – ಶಿಲ್ಪ, ನಾದ ಸೌರಭ :-ಡಾ. ಪಾಟೀಲ ಪುಟ್ಟಪ್ಪ


ನಮ್ಮ ನಾಡಿದು...
  • ಕರ್ನಾಟಕವು, ಭಾರತದ ಶಿಲ್ಪರಚನೆಯ ತಾಯಿಯೆನಿಸಿದೆ. ಒಬ್ಬ ಫ್ರೆಂಚ್ ಲೇಖಕನು ‘ಗೋಲ್ಡನ್ ಏಜ್ ಆಫ್ ಇಂಡಿಯನ್ ಆರ್ಕಿಟೆಕ್ಚರ್’ – ಭಾರತೀಯ ಶಿಲ್ಪದ ಸುವರ್ಣ ಯುಗ ಎಂಬ ಒಂದು ಪುಸ್ತಕವನ್ನು ಬರೆದಿದ್ದಾನೆ. ಅದರೊಳಗಿನ ಅರ್ಧಕ್ಕೆ ಮೇಲ್ಪಟ್ಟು ಚಿತ್ರಗಳು ಐಹೊಳೆ, ಪಟ್ಟದಕಲ್ಲುಗಳಿಗೆ ಸಂಬಂಧಿಸಿದವುಗಳೇ ಆಗಿವೆ. ಶಿಲ್ಪಕಲೆ ಮೊತ್ತಮೊದಲು ಐಹೊಳೆಯಿಂದಲೇ ಆರಂಭಗೊಂಡಿತು.
  • ಚಾಲುಕ್ಯ ಹಾಗೂ ರಾಷ್ಟ್ರಕೂಟ ಶಿಲ್ಪ ಶೈಲಿಯ ಪ್ರಭಾವವು ಮಹಾರಾಷ್ಟ್ರ, ಮಧ್ಯಪ್ರದೇಶ, ಆಂಧ್ರಪ್ರದೇಶ ಹಾಗೂ ಒರಿಸ್ಸಾಗಳ ಮೇಲೆ ಕೂಡ ಆಗಿದೆ.
  • ಮಹಾರಾಷ್ಟ್ರಕ್ಕೆ ತನ್ನದೆಂದು ಹೇಳಿಕೊಳ್ಳುವಂಥ ಯಾವ ಶಿಲ್ಪವೂ ಇಲ್ಲ. ಅಲ್ಲಿರುವ ಶಿಲ್ಪದ ಮೂಲವೆಲ್ಲ ಚಾಲುಕ್ಯರದು. ರಾಷ್ಟ್ರಕೂಟರದು ಹಾಗೂ ಹೊಯಿಸಲಳರದು. ಕೊಲ್ಲಾಪುರದ ಮಹಾಲಕ್ಷ್ಮಿ ದೇವಾಲಯವನ್ನು ನೋಡಿದವರಿಗೆ, ಜಕ್ಕಣಾಚಾರ್ಯ ಶಿಲ್ಪ ಶೈಲಿಯ, ಬೇಲೂರು ಹಳೇಬೀಡುಗಳ ಒಂದು ದೇವಾಲಯವನ್ನು ನೋಡಿದ ಭಾವನೆ ಬರುತ್ತದೆ. ಅಲ್ಲಿ ಪ್ರತಿಷ್ಠಾಪನೆಗೊಂಡ ದೇವತೆ, ಮಹಾಲಕ್ಷ್ಮಿ ಅಲ್ಲ, ಆಕೆ ಜೈನರ ಪದ್ಮಾವತಿ.
  • ಎಲೆಫೆಂಟಾ ಗುಹೆಗಳು, ಅಲ್ಲಿಯ ತ್ರಿಮೂರ್ತಿ, ಅಜಂತಾ ಎಲ್ಲೋರಾಗಳ ಗುಹಾಂತರ್ಗತ ದೇವಾಲಯಗಳು ಕನ್ನಡ ಶಿಲ್ಪಿಗಳ ಕೆತ್ತನೆಯ ಕೆಲಸಗಳಾಗಿವೆ.
  • ರಾಷ್ಟ್ರಕೂಟರು, ಶಿಲ್ಪ, ವಾಸ್ತುಶಿಲ್ಪ ಹಾಗೂ ಲಲಿತಕಲೆಗಳಿಗೆ ಹೆಸರಾಗಿದ್ದರು. ಅವರು, ಔರಂಗಾಬಾದ್ ಜಿಲ್ಲೆಯ ಎಲ್ಲೋರಾದಲ್ಲಿ ನಿರ್ಮಿಸಿದ ಏಕಶಿಲೆಯ ಕೈಲಾಸ ದೇವಾಲಯವು ಶಿಲ್ಪಕಲೆಯ ಸರ್ವಶ್ರೇಷ್ಠ ಮಾದರಿಯಾಗಿದೆ. ವಿನ್ಸೆಂಟ್ ಸ್ಮಿತ್ ನು, ಜಗತ್ತಿನ ಇತಿಹಾಸದಲ್ಲಿ ಅದನ್ನು ಸರಿಗಟ್ಟುವ ಇನ್ನೊಂದು ರಚನೆ ಇಲ್ಲವೆಂದು ಹೇಳುತ್ತಾನೆ. ಅದರ ಕಲಾ ನೈಪುಣ್ಯ ಹಾಗೂ ಸಿದ್ಧಿಗಳು, ಅಲ್ಲಿ ಉಪಯೋಗವಾದ ತಾಂತ್ರಿಕತೆ ಹಾಗೂ ಪರಿಶ್ರಮಗಳನ್ನು ನೋಡಿದರೆ ಅದು ಅದ್ಭುತಗಳ ಅದ್ಭುತವೆಂದು ಯಾರಾದರೂ ಹೇಳುತ್ತಾರೆ. ಆ ದೇವಾಲಯದ ಮೇಲೆ ಕೆತ್ತಿದ ಶಿಲಾಲಿಪಿಯನ್ನು ಬರೆದ ಕವಿಯ ಮಾತನ್ನು ನೋಡಿದರೆ, ಈ ವೈಭವಪೂರ್ಣ ಶಿಲ್ಪರಚನೆಯನ್ನು ಕಂಡ ದೇವಲೋಕದ ಜನರು ಕೂಡ ಕೌತುಕಗೊಂಡು ನಿಬ್ಬೆರಗಿನಿಂದ ಒಬ್ಬರನ್ನೊಬ್ಬರು ಕೇಳಿದ್ದಾರೆ. “ಇದು ಸಾಮಾನ್ಯ ಜನರ ಕೃತಿಯಾಗಿರದೆ, ಸೃಷ್ಟಿಕರ್ತನ ಚಮತ್ಕಾರವಾಗಿದೆ. ಇಲ್ಲದೆ ಹೋಗಿದ್ದರೆ ಇದು ಇಷ್ಟೊಂದು ವೈಭವಪೂರ್ಣವಾಗಿ ಇರುವುದು ಹೇಗೆ ಸಾಧ್ಯವಿದ್ದೀತು?”
  • ಕರ್ನಾಟಕದ ಶಿಲ್ಪಕಲೆ ಗೋವೆಯ ಕದಂಬರ ಕಾಲದಲ್ಲಿ ಕಾಂಬೋಡಿಯದ ವರೆಗೆ ಹಬ್ಬಿಹೋಗಿದ್ದಿತು. ಚಂಪಾದಲ್ಲಿಯ ಪ್ರಣವೇಶ್ವರ ದೇವಾಲಯವು ಕನ್ನಡ ಶಿಲ್ಪಿಗಳ ಕಲಾವೈಭವಕ್ಕೆ ಮೂಕಸಾಕ್ಷಿಯಾಗಿ ನಿಂತಿವೆ.
  • ಕರ್ನಾಟಕ ಸ್ತ್ರೀಪುರುಷರ ಶ್ರೇಷ್ಠ ಮಟ್ಟದ ಸಂಸ್ಕೃತಿಯು ದಕ್ಷಿಣದ ತಮಿಳುನಾಡಿನಿಂದ ಹಿಡಿದು ಉತ್ತರದ ಕಾಶ್ಮೀರದವರೆಗೆ ಜನರನ್ನು ಆಕರ್ಷಿಸಿದ್ದಿತು.
  • ಕಾಶ್ಮೀರದ ರಾಜಪುತ್ರನೊಬ್ಬನು ಕರ್ನಾಟಕದ ಚಾಲುಕ್ಯ ರಾಜಪುತ್ರಿ ಶಾಂತಲಾದೇವಿಯ ರೂಪ ಲಾವಣ್ಯ ಹಾಗೂ ಕಲಾಭಿಜ್ಞತೆಗೆ ಮಾರುಹೋಗಿ ಅವಳಿಗೆ ಮರುಳಾಗಿದ್ದನೆನ್ನುವ ಉಲ್ಲೇಖ ಕಾಶ್ಮೀರದ ರಾಜತರಂಗಿಣಿಯಲ್ಲಿ ಬರುತ್ತದೆ.
  • ಕರ್ನಾಟಕದಲ್ಲಿ ಶಿಕ್ಷಣವು ಅದರ ಎಲ್ಲ ಹಂತಗಳಲ್ಲಿಯೂ ಸಂಪೂರ್ಣವಾಗಿ ಉಚಿತವಾಗಿದ್ದಿತು. ವಿದ್ಯಾರ್ಥಿಗಳಿಂದ ಶುಲ್ಕ ಪಡೆದು ಅವರಿಗೆ ಓದು ಹೇಳಿಕೊಡುತ್ತಿದ್ದರೆನ್ನುವುದು ಆಗ ಯಾರೊಬ್ಬರೂ ಕೇಳರಿಯದ ಸಂಗತಿ. ಎಷ್ಟೋ ಉಚ್ಚ ವಿದ್ಯಾ ಸಂಸ್ಥೆಗಳಲ್ಲಿ ಶಿಕ್ಷಣವು ಎಷ್ಟೊಂದು ಉಚಿತವಾಗಿತ್ತೆನ್ನುವುದನ್ನು ಈಗ ಊಹಿಸುವುದು ಕೂಡ ಸಾಧ್ಯವಿಲ್ಲ. ವಿದ್ಯಾರ್ಥಿಗಳಿಂದ ಏನೊಂದನ್ನೂ ತೆಗೆದುಕೊಳ್ಳದೆ ಅವರಿಗೆ ಊಟ, ವಸತಿ ಹಾಗೂ ವಸ್ತ್ರಗಳನ್ನು ಒದಗಿಸಿ ಕೊಡುವ ವ್ಯವಸ್ಥೆ ಇದ್ದಿತು.
  • ಹೆಣ್ಣು ಮಕ್ಕಳಿಗೆ ತಂತಮ್ಮ ಮನೆಗಳಲ್ಲಿಯೇ ಭಾಷೆ, ಸಾಹಿತ್ಯ, ನೃತ್ಯ, ಸಂಗೀತ ಹಾಗೂ ಇನ್ನಿತರ ಲಲಿತ ಕಲೆಗಳನ್ನು, ವಿಶೇಷ ಶಿಕ್ಷಕರ ಮೂಲಕ ಕಲಿಸಿಕೊಡುತ್ತಿದ್ದರೆನ್ನುವ ಸಂಗತಿ ಅನೇಕ ಕವಿ ಕೃತಿಗಳ ಮೂಲಕ ನಮಗೆ ಗೊತ್ತಾಗುತ್ತದೆ.
  • ಕಾಶ್ಮೀರದ ಕವಿ ಬಿಲ್ಹಣನು, ಕರ್ನಾಟಕದ ಜನರ ಉಚ್ಚಮಟ್ಟದ ಸಂಸ್ಕೃತಿಯನ್ನು ಮೆಚ್ಚಿ, ದೊರೆ ಆರನೆಯ ವಿಕ್ರಮಾದಿತ್ಯನ ಅಪರಿಮಿತ ಔದಾರ್ಯಕ್ಕೆ ಮಾರುಹೋಗಿ, ದೂರದ ಕಾಶ್ಮೀರದಿಂದ ತಾನು ಕರ್ನಾಟಕಕ್ಕೆ ಬಂದ ಕಥೆಯನ್ನು ತನ್ನ ಕೃತಿಯಲ್ಲಿ ಉಲ್ಲೇಖಿಸಿದ್ದಾನೆ.
  • ಶಕ ವರ್ಷದ ಪರಂಪರೆ ಕರ್ನಾಟಕದಿಂದಲೇ ಆರಂಭಗೊಂಡು ಭಾರತದ ತುಂಬೆಲ್ಲ ಪಸರಿಸಿಕೊಂಡಿತು. ವಿಕ್ರಮಾದಿತ್ಯ ಶಕೆ ಎಂಬುದು ಪ್ರಾರಂಭಗೊಳ್ಳುವುದಕ್ಕೆ ಕಲ್ಯಾಣ ಚಾಲುಕ್ಯರ ಈ ವಿಕ್ರಮಾದಿತ್ಯನೇ ಕಾರಣನೆನಿಸಿದ್ದಾನೆ. ಶಕ ಪುರುಷನೆನಿಸಿಕೊಳ್ಳುವುದಕ್ಕೆ ಅವನಲ್ಲಿ ಸರ್ವ ಅರ್ಹತೆಗಳೂ ಇದ್ದವು.
  • ಶಾಲಿವಾಹನ ಸಂವತ್ಸರ ಎನ್ನುವುದು ಕೂಡ ಪ್ರತಿಷ್ಠಾನದಲ್ಲಿ – ಅಂದರೆ ಈಗಿನ ಪೈಠಣದಲ್ಲಿ ಆಳುತ್ತಿದ್ದ ಸಾತವಾಹನ ದೊರೆಗಳಿಂದಲೇ ಬಂದಿದೆ. ಈ ಸಾತವಾಹನರೆ ಶಾಲಿವಾಹನರೆಂದು ಪ್ರಾಖ್ಯಾತರೆನಿಸಿದ್ದಾರೆ. ಅವರು ವಿದೇಶೀ ಮೂಲದ ಶಾಕ್ ರನ್ನು ಸೋಲಿಸಿದರು. ಆದರೆ ಆ ಶಾಕ್ ರ ಕಾರಣದಿಂದ ಜನಮನದಲ್ಲಿ ಶಕೆ ಎನ್ನುವುದು ಆಳವಾಗಿ ಬೇರೂರಿದ್ದಿತು. ಅದನ್ನು ಜನರ ಮನಸ್ಸಿನಿಂದ ಕಿತ್ತು ಹಾಕುವುದು ಸುಲಭವಾಗಿರಲಿಲ್ಲ. ಅದೇ ಮುಂದೆ ಪರಿವರ್ತನೆಗೊಂಡು ಶಾಲಿವಾಹನ ಶಕೆ ಎಂದಾಯಿತು. ಪ್ರತಿಷ್ಠಾನದ ಪಂಡಿತರಿಗೂ ಖಗೋಳಶಾಸ್ತ್ರಜ್ಞರಿಗೂ ಶಾಲಿವಾಹನ ಶಕೆ ಎನ್ನುವುದು ಸಮ್ಮತವೆನಿಸಿತು.
  • ಈ ಶಾತವಾಹನರು, ಇಲ್ಲವೇ ಶಾಲಿವಾಹನರು ಮಾತೃ ಪ್ರಧಾನ ವ್ಯವಸ್ಥೆಯನ್ನು ಒಪ್ಪಿದ್ದರು. ತಂದೆ ಇದ್ದರೂ ಅವರು ತಂದೆಯ ಹೆಸರನ್ನು ಹೇಳುತ್ತಿರಲಿಲ್ಲ. ತಾಯಿಯ ಹೆಸರನ್ನು ಹೇಳುತ್ತಿದ್ದರು. ಸಾತಕರ್ಣಿ ಎಂಬಾತನು ಗೌತಮೀ ಪುತ್ರ. ಎಂತಲೇ ಅವನು ಗೌತಮೀಪುತ್ರ ಸಾತಕರ್ಣಿ ಎಂದೇ ಹೆಸರಾಗಿದ್ದನು.
  • ಪರಂಪರೆ ಹಾಗೂ ಸಂಪ್ರದಾಯದ ಮೇರೆಗೆ ಶಾಲಿವಾಹನ ಶಕೆಯ ಹೊಸ ವರ್ಷವು ಚೈತ್ರಮಾಸದ ಆರಂಭಕ್ಕೆ ಬರುತ್ತದೆ. ಅದನ್ನು ಯುಗಾದಿ ಎಂದು ಕರೆಯುತ್ತಾರೆ. ಒಂದು ಯುಗದ ಆರಂಭ ಎಂದು ಅದರ ಅರ್ಥ. ಅದನ್ನು ಈಗಿನ ಮಹಾರಾಷ್ಟ್ರ, ಕರ್ನಾಟಕ ಹಾಗೂ ಆಂದ್ರಪ್ರದೆಶಗಳಲ್ಲಿ ವೈಭವದಿಂದ ಆಚರಿಸುತ್ತಾರೆ. ಇದು ಸಾತವಾಹನ ಪ್ರಭಾವದಿಂದ ನಡೆದುಕೊಂಡು ಬಂದಿದೆ.
  • ಮಹಾರಾಷ್ಟ್ರದಲ್ಲಿ ಈ ಯುಗಾದಿಯನ್ನು ‘ಗುಡಿ ಪಾಡವಾ’ ಎಂದು ಕರೆಯುತ್ತಾರೆ. ಮನೆಯ ಮೇಲೆ ಒಂದು ಅಲಂಕೃತ ಗುಡಿ, ಅಂದರೆ ಧ್ವಜವನ್ನು ಹಾರಿಸುತ್ತಾರೆ. ಆ ಧ್ವಜವನ್ನು ಹಾರಿಸುವುದು ವಿಜಯದ ಸಂಕೇತವಾಗಿದೆ. ಗುಡಿ ಪಾಡವಾ ಎನ್ನುವುದು ಮೂಲತಃ ಕನ್ನಡದ್ದಾಗಿದೆ. ಗುಡಿ ಎಂದರೆ ಧ್ವಜ, ಬಾವುಟ, ಪಾಡವಾ ಎನ್ನುವುದು ಸಂಸ್ಕೃತದ ಪ್ರತಿಪದ – ಮೊದಲ ದಿನ ಎಂಬುದರಿಂದ ಬಂದಿದೆ. ಹತ್ತನೆಯ ಶತಮಾನದ ಕನ್ನಡ ಶಿಲಾಶಾಸನಗಳಲ್ಲಿ ಈ ಪದವನ್ನು ಉಪಯೋಗಿಸಿದ್ದಾರೆ. ಈ ಧ್ವಜ, ಈ ಹಬ್ಬ ಎರಡೂ ಕರ್ನಾಟಕದಿಂದಲೇ ಮಹಾರಾಷ್ಟ್ರಕ್ಕೆ ಹೋಗಿವೆ.
  • ಒಂಬತ್ತು ಹಾಗೂ ಹತ್ತನೆಯ ಶತಮಾನಗಳಲ್ಲಿ ಪ್ರತಿಷ್ಠಾನವು ಕನ್ನಡ ಸಾಹಿತ್ಯ ಹಾಗೂ ಸಂಸ್ಕೃತಿಗಳ ಕೇಂದ್ರವಾಗಿತ್ತೆನ್ನುವ ಉಲ್ಲೇಖವನ್ನು ‘ಕುವಲಯಮಾಲಾ’ ಎಂಬ ಸಂಸ್ಕೃತ ಕಾವ್ಯದಲ್ಲಿ ನಾವು ಕಾಣುತ್ತೇವೆ.
  • ಮೇವಾಡದ ಪ್ರಖ್ಯಾತ ರಜಪೂತ ದೊರೆ ಹಮ್ಮೀರನು ಬಹು ಪರಿಶುಭ್ರವಾದ ಪ್ರತೀತಿಯನ್ನು ಪಡೆದಿದ್ದನೆಂದು ಹೇಳುತ್ತಾರೆ. ಅದು ಪೂರ್ಣಚಂದ್ರನಂತೆ ಪ್ರಕಾಶಮಾನವಾಗಿದ್ದಿತಂತೆ. ಬೆಳ್ಳಗೆ ಹೇಗೆ ಎನ್ನುವುದು ೧೪೨೮ರಲ್ಲಿ ದಾಖಲೆಗೊಂಡಿರುವುದನ್ನು ಕವಿ ಹೇಳಿದ್ದಾನೆ. ಹಮ್ಮೀರನ ಪ್ರತೀತಿಯು ಕರ್ನಾಟಕ ಸ್ತ್ರೀಯರ ಥಳಥಳನೆ ಹೊಳೆಯುವ ದಂತಪಂಕ್ತಿಗಿಂತಲೂ ಪರಿಶುಭ್ರವಾಗಿದ್ದಿತೆಂದು ವರ್ಣಿಸಲಾಗಿದೆ. 
  • ತನ್ನ ಅಜ್ಜ ಕಪಿಲೆಂದ್ರನ ಕೀರ್ತಿಯು ಕಳಂಕರಹಿತವಾಗಿದ್ದಿತೆಂದು ಒರಿಸ್ಸಾದ ಗಜಪತಿ ದೊರೆ ಪ್ರತಾಪರುದ್ರನು ಹೇಳಿ, ಅದನ್ನು ಸುಗ್ಗಿಯ ಕಾಲದ ಚಂದ್ರನಿಗೂ, ಕರ್ನಾಟಕ ಕನ್ಯೆಯರ ಆಕರ್ಷಕ ಮುಖಕಾಂತಿಗೂ ಹೋಲಿಸಿದ್ದಾನೆ.
  • ಕರ್ನಾಟಕ ಲಲನೆಯರ ಬಗೆಗೆ ಹೊರಗಿನ ನಿರೀಕ್ಷಕರಿಂದ ಬಂದಿರುವ ಮುಕ್ತಕಂಠದ ಈ ವರ್ಣನೆ ಕರ್ನಾಟಕ ಸ್ತ್ರೀಯರ ನಿಷ್ಕಳಂಕ ಚಾರಿತ್ರ್ಯವನ್ನೂ ಅವರ ಸಾಂಸ್ಕೃತಿಕ ಘನತೆಯನ್ನೂ ತೋರಿಸಿಕೊಡುತ್ತದೆ.
  • ಕರ್ನಾಟಕೀ ಎನ್ನುವ ಸಂಗೀತವು ಕರ್ನಾಟಕದ್ದೇ ಆಗಿದೆ. ಕರ್ನಾಟಕದಲ್ಲಿ ಉಗಮಗೊಂಡ ಆ ಸಂಗೀತವು ವಾತಾಪಿಯಿಂದ ಅಂದರೆ ಬಾದಾಮಿಯಿಂದ, ಆಂಧ್ರಕ್ಕೆ, ತಮಿಳುನಾಡಿಗೆ ಹೋಯಿತು. ಅಷ್ಟೇ ಏಕೆ, ಅದು ದೂರದ ಬಿಹಾರಕ್ಕೆ ಹೋಗಿ ಅಲ್ಲಿ ಮಿಥಿಲಾ ಪಟ್ಟಣದಲ್ಲಿ ನೆಲೆಗೊಂಡಿತು. 
  • ಬಂಗಾಲೀ ಸ್ತ್ರೀಯರು, ಕರ್ನಾಟಕ ಕೇಶಾಲಂಕಾರ ಪದ್ದತಿಗೆ ಮರುಳಾಗಿದ್ದರು. ಅಲ್ಲಿ ಕರ್ನಾಟಕ ಕೇಶಾಲಂಕಾರ ಪದ್ಧತಿ ಎನ್ನುವುದೊಂದು ಇದೆಯೆಂದು ಅಲ್ಲಿಯ ಸಂಶೋಧಕ ಜಯಸಿಂಹ ಎಂಬಾತನಿಂದ ನಮಗೆ ತಿಳಿದು ಬಂದಿದೆ.
  • ಕರ್ನಾಟಕವು ಧರ್ಮಗಳ ತೂಗುತೊಟ್ಟಿಲು ಆಗಿದೆ. ಬಸವೇಶ್ವರರ ವೀರಶೈವವು ಕಾಶ್ಮೀರ, ಆಂಧ್ರ, ಗುಜರಾತ, ಮಾಳವಾ ಹಾಗೂ ತಮಿಳುನಾಡುಗಳಿಂದ ಜನರನ್ನು ಆಕರ್ಷಿಸಿತು. ಕಾಶ್ಮೀರದ ಮಹಾದೇವ ಮಹಾರಾಜನು, ತನ್ನ ಅರಸೊತ್ತಿಗೆಯ ಅಲಂಕಾರಗಳನ್ನು ಬಿಟ್ಟು ಶ್ರೀಸಾಮಾನ್ಯತೆಗೆ ಒಲಿದು ಮೋಳಿಗೆಯ ಮಾರಯ್ಯನಾದ.
  • ಮಧ್ವಾಚಾರ್ಯರ ಭಕ್ತಿ ಪಂಥವು ಆಂಧ್ರ, ಒರಿಸ್ಸಾಗಳನ್ನು ದಾಟಿ, ಬಂಗಾಳಕ್ಕೆ ಹೋಯಿತು. ಚೈತನ್ಯರ ಶಿಷ್ಯ ಜೀವ ಗೋಸ್ವಾಮಿಯವರ ಪೂರ್ವಿಕರು ಕರ್ನಾಟಕದವರಾಗಿದ್ದಾರೆ.
  • ಕರ್ನಾಟಕದ ಧಾರ್ಮಿಕ ಸಹಿಷ್ಣುತೆಯು, ಬಿಹಾರದಿಂದ ಚಂದ್ರಗುಪ್ತ ಮೌರ್ಯನನ್ನು, ತಮಿಳುನಾಡಿನಿಂದ ರಾಮಾನುಜಾಚಾರ್ಯರನ್ನೂ ಆಕರ್ಷಿಸಿತು. ಕನ್ನಡವು ಎಲ್ಲರಿಗೂ ಆಶ್ರಯ ಕೊಟ್ಟಿದೆಯಲ್ಲದೆ, ಯಾರ ಆಶ್ರಯವನ್ನೂ ಅದು ಕಸಿದುಕೊಂದಿಲ್ಲ.


ಕೃಪೆ: ೧೯೯೪ರ ವರ್ಷದಲ್ಲಿ 'ತರಂಗ' ವಾರಪತ್ರಿಕೆಯಲ್ಲಿ ಪ್ರಕಟವಾದ ಲೇಖನ

Comments

Popular Posts