ನೆಪ ಬೇಡದೇ ನೆನಪಾಗುವ ಕುಮಾರಿಲರು...

ಮತ್ತೆ ಮತ್ತೆ ನೆನಪಾಗುತ್ತಿದ್ದಾರೆ ಕುಮಾರಿಲರು.
ಅವರ ಕಾಲ ಶ್ರೀ ಶಂಕರರಿಗಿಂತ ಸ್ವಲ್ಪ ಮೊದಲು.
ಕುಮಾರಿಲರೆಂದರೆ ಚೂಡಾಮಣೀ ರಾಜ್ಯದ ಆಸ್ಥಾನ ಪಂಡಿತರು. ವಾರ್ತಿಕಾಚಾರ್ಯರೆಂದೇ ಪ್ರಸಿದ್ಧರು ಆ ಕಾಲದಲ್ಲಿ.
ಅವರು ಮೈಥಿಲ ಬ್ರಾಹ್ಮಣರು. ವಿದೇಹ ರಾಜ್ಯದ ಮೈಥಿಲಿ ನಗರದ ಬ್ರಾಹ್ಮಣರು ಆ ಕಾಲದಲ್ಲಿ ಕರೆಯಲ್ಪಡುತ್ತಿದ್ದುದು ಹಾಗೆ..
ಪ್ರಕಾಂಡ ಪಡಿತರಾಗಿದ್ದರು ಅವರು. ವಿದ್ಯೆಯಿದ್ದಲ್ಲಿ ಧನದ ಅಭಾವ ಹೆಚ್ಚಾಗಿ ಕಂಡುಬರುವುದುಂಟು.
ಇಲ್ಲಿ ಹಾಗಲ್ಲ - ಸರಸ್ವತಿಯೊಂದಿಗೆ ಲಕ್ಷ್ಮಿಯೂ ಒಲಿದಿದ್ದಳು ಅವರಿಗೆ.
ಆಗರ್ಭ ಶ್ರೀಮಂತರು...
ವೇದ ಪ್ರೇಮಿ...
ವೇದದ ಮೇಲೆ ಅಪರಿಮಿತ ಶ್ರದ್ಧೆ, ಕರ್ಮ ಸಾರ್ಥಕತಾವಾದಿ ಕುಮಾರಿಲರು...

ಇಂದು ಅವರು ನೆನಪಾಗುತ್ತಿರುವುದು,
ಅವರ ತ್ಯಾಗಕ್ಕಾಗಿ - ಅವರು ತೋರಿದ ಸ್ಥೈರ್ಯಕ್ಕಾಗಿ - ಅವರ ಶೌರ್ಯಕ್ಕಾಗಿ...

ಅಂದು,
ತಾವು ಬರೆದ ಭಾಷ್ಯಕ್ಕೆ ವಾರ್ತಿಕ ಬರೆಯಲು ಕುಮಾರಿಲರೇ ಸರಿ ಎಂದು ನಿರ್ಣಯಿಸಿದ ಆಚಾರ್ಯ ಶಂಕರರು, ಕುಮಾರಿಲರನ್ನು ಕಾಣಲು ಪ್ರಯಾಗದತ್ತ ಪ್ರಯಾಣ ಮಾಡುತ್ತಾರೆ.
ಅಲ್ಲಿ ನೋಡಿದರೆ,
ಕುಮಾರಿಲರು ಆತ್ಮಾಹುತಿ ಮಾಡಿಕೊಳ್ಳಲು ತಯಾರಾಗಿರುತಾರೆ.

ಮೀಮಾಂಸಾ ಕೇಸರಿ ಎಂದೇ ಕರೆಸಿಕೊಳ್ಳುವ ಕುಮಾರಿಲರು ತುಶಾನಲಪ್ರವಿಷ್ಠರಾಗಿದ್ದಾರೆ.
ಅಂದರೆ,
ಹೊಟ್ಟಿನ ದೊಡ್ಡ ರಾಶಿ, ಅದರ ನಡುವೆ ಕುಮಾರಿಲರು. ಹೊಟ್ಟು ನಿಧಾನವಾಗಿ ಕೆಂಡವಾಗುತ್ತಾ ಬರುತ್ತಿದೆ. ಚೂರು ಚೂರೇ ಸುಡುತ್ತಿದೆ ಕುಮಾರಿಲರನ್ನು. ಸುಡುವುದೂ ಅಲ್ಲ ಅದು - ಬೇಯಿಸುತ್ತಾ ಬರುತ್ತಿದೆ.
ಸಣ್ಣ ಊದು ಬತ್ತಿ ತಾಗಿದರೂ ನಾವು ಬೊಬ್ಬಿಡುತ್ತೇವೆ, ಅಂಥಹದ್ದರಲ್ಲಿ ಉರಿಯುವ ಹೊಟ್ಟಿನ ರಾಶಿಯ ನಡುವೆ ಧೈರ್ಯದಿಂದ ಇದ್ದರು ಕುಮಾರಿಲರು.
ಇದನ್ನು ಕಂಡ ಶಂಕರರು ಆ ಹೊಟ್ಟನ್ನು ಆರಿಸಲು ಕಮಂಡಲದಿಂದ ನೀರನ್ನು ಕೈಗೆ ತೆಗೆದುಕೊಳ್ಳುತ್ತಾರೆ.
"ಬೇಡ ಬೇಡ"ವೆಂದು ಕುಮಾರಿಲರು ತಡೆಯುತ್ತಾರೆ. ಅಷ್ಟೇ ಅಲ್ಲ, "ವೇದ ರಕ್ಷಣೇಗೆ ನೀವಿದ್ದೀರಿ ಎಂಬ ನಿಶ್ಚಿಂತೆಯಿದ, ಗುರುವಿಗೆ ಎಸಗಿದ ಅಪಚಾರಕ್ಕೆ ಪ್ರಾಯಶ್ಚಿತ್ತ ಮಾಡಿಕೊಳ್ಳುತ್ತಿದ್ದೇನೆ. ಕಾಶ್ಮೀರದಲ್ಲಿ ಮಂಡನ ಮಿಶ್ರನೆಂಬ ನನ್ನ ಶಿಷ್ಯನಿದ್ದಾನೆ, ಅವನನ್ನು ಗೆಲ್ಲಿ - ಅವನು ವಾರ್ತಿಕ ಬರೆಯಲಿ. ನನಗೆ ರಾಮ ತಾರಕ ಮಂತ್ರದ ಉಪದೇಶ ಕೊಟ್ಟು ದೇಹ ಬಿಡಲು ಅನುಮತಿ ಕೊಡಿ"
ಮೃತ್ಯುವು ಕಣ್ಣೆದುರೇ ಇದ್ದಾಗ ಧೀರತನದಿಂದ ಕುಮಾರುಲರು ಹೇಳಿದ ಮಾತುಗಳಿವು.
"ಗುರಿಮುಟ್ಟುವಾತುರದಿ ಸರಿದಾರಿ ಬಿಟ್ಟುದಕೆ, ಹೊಟ್ಟಲ್ಲಿ ಸುಟ್ಟುಕೊಳುವ ಆತ್ಮ ಶುದ್ಧಿ..."

ಪ್ರಾಯಶ್ಚಿತ್ತವೆಂಬಂತೆ ಮೃತ್ಯುವನ್ನೇ ಆಹ್ವಾನಿಸುವಂತಹದ್ದೇನಾಗಿತ್ತು?
ಅವರ ಪ್ರವರ್ಧಮಾನದ ಕಾಲವೆಂದರೆ, ಅದು, ವೇದಗಳ ಮೇಲೆ ಅವೈದಿಕ ಮತಗಳ ಆಕ್ರಮಣವಾಗುತ್ತಿದ್ದಂತಹ ಕಾಲ. ವೇದ ಸುಳ್ಳು, ಕರ್ಮ ನಿರರ್ಥಕ ಎಂಬ ಧೋರಣೆಯಲ್ಲಿ ಯಜ್ಞ ಯಾಗಗಳ ವಿಧ್ವಂಸಗಳೇ ನಡೆಯುತ್ತಿದ್ದ ಕಾಲದಲ್ಲಿ ಶ್ರೀ ಕುಮಾರಿಲರು ವೇದರಕ್ಷಣೆಗೆ ಕಂಕಣ ಬದ್ಧರಾದರು. ಆ ಕಾಲದಲ್ಲಿ ಬೌಧ್ಧ - ಜೈನ ಮತಗಳಿಗೇ ರಾಜಾಶ್ರಯ ದೊರೆಯುತ್ತಾ, ವೇದ ನಿಂದಕರೇ ಹೆಚ್ಚಾಗುತ್ತಿದ್ದರು. ಇಂದಿನ ದಿನದಲ್ಲಿ ಯಾವ ಪ್ರಮಾಣದಲ್ಲಿ ಮತಾಂತರ ನಡೆಯುತ್ತಿದೆಯೋ ಅದರ ನೂರು ಪಟ್ಟು ವೇಗದಲ್ಲಿ ಅಂದು ಮತಾಂತರಗಳು ನಡೆಯುತ್ತಿದ್ದವು.
ಈಗ ಇವನು - ಮತ್ತೆ ಅವನು - ಇಂದು ಈ ರಾಜ - ನಾಳೆ ಆ ರಾಜ ಮತಾಂತರಗೊಳ್ಳುತ್ತಲೇ ಹೋಗಿ, ಎಲ್ಲಿ ವೇದ ನಶಿಸಿ ಹೋಗುವುದೋ ಎಂಬ ಸಂಶಯವು ಹುಟ್ಟತೊಡಗಿತೋ, ಅಂದೇ ತಮ್ಮ ಸರ್ವಸ್ವವನ್ನೂ ವೇದರಕ್ಷಣೆಗೆ ಮುಡಿಪಾಗಿಟ್ಟರು.
ಕರ್ಮ ಮೀಮಾಂಸೆಯ ತಲಸ್ಪರ್ಶಿ ಅಧ್ಯಯನ ಮಾಡಿದ್ದ ಕುಮಾರಿಲರು, ಆ ಕ್ಷಣವೇ ಕಾರ್ಯಪ್ರವೃತ್ತರಾದರು.

ಆ ಕಾಲದಲ್ಲಿ ವೈದಿಕ ಮತಗಳಿಂದ ಅವೈದಿಕ ಮತಗಳಿಗೆ ಮತಾಂತರವಾಗುತ್ತಿದ್ದಾರೆಯೇ ಹೊರತು - ವೈದಿಕ ಮತಗಳಿಗೆ ಯಾರೂ ಬರುತ್ತಿಲ್ಲ. ವೈದಿಕರು ಅವೈದಿಕರನ್ನು ಅಷ್ಟು ಸುಲಭದಲ್ಲಿ ಒಳಸೇರಿಸುತ್ತಲೂ ಇರಲಿಲ್ಲ. ಅಷ್ಟೇ ಅಲ್ಲದೇ, ವೈದಿಕರೇ ಅವೈದಿಕರಾಗಿ ಮತಾಂತರ ಹೊಂದುತ್ತಿದ್ದುದರಿಂದ, ಅವರಿಗೆ ವೈದಿಕ ಮತದ ಎಲ್ಲ ಒಳಗುಟ್ಟುಗಳೂ ಗೊತ್ತಿರುತ್ತಿದ್ದವು. ಇದು ವಾದದಲ್ಲಿ ವೈದಿಕರು ಸೋಲಲು ಪ್ರಮುಖ ಕಾರಣವಾಗಿತ್ತು. ಇದನ್ನು ಮನಗಂಡ ಕುಮಾರಿಲರು, "ಎಲ್ಲಿಯವರೆಗೆ ಅವೈದಿಕರ ಒಳಗಿನ ದೌರ್ಬಲ್ಯವನ್ನು ಅರಿಯಲು ಸಾಧ್ಯವಾಗದೋ ಅಲ್ಲಿಯವರೆಗೆ ವೇದದ ಪ್ರಮಾಣೀಕರಣ ಕಷ್ಟ" ಎಂಬ ನಿರ್ಧಾರಕ್ಕೆ ಬಂದರು.

ಬೌದ್ಧ ಧರ್ಮದ ಅಧ್ಯಯನ ನಡೆಸಿ ಅವರ ಒಳಗುಟ್ಟು ತಿಳಿಯಲೆಂದೇ ಅಂದಿನ ಪ್ರಸಿದ್ಧ ಬೌದ್ಧ ವಿದ್ಯಾಲಯವಾದ ನಾಲಂದಾ ವಿಶ್ವ ವಿದ್ಯಾಲಕ್ಕೆ ಸೇರಿಕೊಂಡರು. ತಮಗೆ ಪ್ರಿಯವಾಗಿದ್ದ ಎಲ್ಲ ವೈದಿಕ ಆಚರಣೆಗಳನ್ನು ಬಿಟ್ಟು, ಬುಧ್ಧ ವೇಷಧಾರಿಯಾಗಿ ನಾಲಂದಾದ ಒಳಸೇರಿ ಅಲ್ಲಿನ ವಿದ್ಯಾರ್ಥಿಯಾಗುತ್ತಾರೆ.
ಆಚಾರ್ಯ ಧರ್ಮಪಾಲರು ಎಂದರೆ ಆಗಿನ ಬೌದ್ಧ ಪಂಡಿತರಲ್ಲಿ ಬಹುದೊಡ್ಡ ಹೆಸರು.
ಅವರು ಆಗಿನ ಕುಲಪತಿಗಳು. ಯೋಗಾಚಾರ ಮತ್ತು ಶೂನ್ಯವಾದದಲ್ಲಿ ಅಪರಿಮಿತ ಪಾಂಡಿತ್ಯ ಅವರದು.
ಅವರ ಶಿಷ್ಯತ್ವವನ್ನು ಕುಮಾರಿಲರು ಸ್ವೀಕರಿಸುತ್ತಾರೆ.
ದಿನಗಳು ಸರಿಯುತ್ತವೆ - ಇಂದಿನ ಗುಪ್ತಚಾರರು ಮಾಡುವಂತೆಯೇ - ನಿಜ ವೇಷ ಮತ್ತು ಆಚರಣೆಗಳನ್ನು ಮರೆಮಾಚಿ ಬೌದ್ಧ ಧರ್ಮದ ಅಧ್ಯಯನದಲ್ಲಿ ತೊಡಗುತ್ತಾರೆ.
ಹಾಗೇ ಒಂದು ದಿನ,
ಧರ್ಮಪಾಲರ ತರಗತಿ ನಡೆಯುತ್ತಿತ್ತು. ಪಾಠ ಮಾಡುತ್ತಾ ಧರ್ಮಪಾಲರ ಬಾಯಲ್ಲಿ ಅಪಾರವಾಗಿ ವೇದನಿಂದೆ, ಬಯಿಗುಳಗಳು..
ಸಹಿಸೀ ಸಹಿಸೀ - ಸಹಿಸಲಾರದೆ ಸೋತು, ಕಣ್ಣೀರ ಬಿಂದುಗಳುದುರಿದವು ಕುಮಾರಿಲರಿಂದ.
ಧಾರಾಕಾರ ಕಣ್ಣೀರು...
ಸಿಕ್ಕಿಬಿದ್ದರು ಕುಮಾರಿಲರು.
"ಅದ್ಯಾಕೆ ನಿನ್ನ ಕಣ್ಣಿನಿಂದ ನೀರು?
ಯಾರು ನೀನು?
.
.
ಅಬೌದ್ಧ ನೀನು.. ಹೇಗೆ ಬಂದೆ ಇಲ್ಲಿಗೆ? ಯಾಕೆ ಬಂದೆ?" ಎಲ್ಲರಲ್ಲೂ ಸಂಶಯ.
"ಈ ಕ್ಷಣವೇ ಬೌದ್ಧ ವಿಹಾರ ಬಿಟ್ಟು ನಡೆ" ಧರ್ಮಪಾಲರಿಂದ ಆದೇಶ ಬಂತು.
ಉಳಿದವರಲ್ಲಿ ಆ ಸಹನೆಯೂ ಇರಲಿಲ್ಲ. ಚಿತ್ರಹಿಂಸೆ ಕೊಟ್ಟರು ಕುಮಾರಿಲರಿಗೆ. ಅವರನ್ನು ಪರ್ವತಾಗ್ರಕ್ಕೆ ಎಳೆದುಕೊಂಡು ಹೋಗಿ ಅಲ್ಲಿಂದ ನೂಕುತ್ತಾರೆ ಕೆಳಗೆ.
ವೇದಗಳ ಮೇಲೆ ಅವರಿಗೆಂಥಃ ನಂಬಿಕೆಯೆಂದರೆ, "ವೇದಗಳು ಪ್ರಮಾಣವಾಗಿದ್ದರೆ ಬದುಕುವೆ" ಎಂದು ಹೇಳುತ್ತಾ ಕೆಳಗೆ ಬೀಳುತ್ತಾರೆ.
ವೇದದ ಪ್ರಭಾವವೋ ಏನೋ, ಕುಮಾರಿಲರು ಬದುಕುತ್ತಾರೆ.

ಅಲ್ಲಿಂದ ಅವರು ವೇದರಕ್ಷಣೆಗೆ ವೇದ ಸೇನಾನಿಯಾಗುತ್ತರೆ.
ಬೌದ್ಧರಿಗೆ,  "ನೀವು ಗೆದ್ದರೆ ನಾನು ಬೌದ್ಧನಾಗುತ್ತೇನೆ, ನಾನು ಗೆದ್ದರಿ ನೀವು ದೇಶಬಿಟ್ಟು ಹೋಗಬೇಕು" ಎಂಬ ಶರತ್ತಿನೊಂದಿಗೆ ಸವಾಲು ಹಾಕುತ್ತಾರೆ. ಹೋದ ಹೋದಲ್ಲಿ ವೈದಿಕ ಧರ್ಮದ ವಿಜಯವಾಗುತ್ತದೆ.
ಬೌದ್ಧರನ್ನು ಹಿಮ್ಮೆಟ್ಟಿಸಿ ದಕ್ಷಿಣಕ್ಕೆ ಬರುತ್ತಾರೆ, ಇಲ್ಲಿನ ಜೈನರನ್ನು ವಾದದಲ್ಲಿ ಸೋಲಿಸಿದ ಬಳಿಕ, ವೇದ ರಕ್ಷಣೆಯ ಕೆಲಸ ಇನ್ನೂ ಉಳಿದಿದ್ದಂತೆಯೇ, ಪ್ರಾಯಶ್ಚಿತ್ತದ ಕಡೆ ಮುಖ ಮಾಡುತ್ತಾರೆ.
ಇವರಿಂದಲೇ ವಾರ್ತಿಕ ಬರೆಸಬೇಕೆಂದು ಇವರನ್ನು ಹುಡುಕುತ್ತಾ ಬಂದ ಶ್ರೀ ಶಂಕರರಿಗೆ ಕಂಡದ್ದು, "ಆತ್ಮಾಹುತಿ" ಮಾಡಿಕೊಳ್ಳಲು ಹೊಟ್ಟಿನ ರಾಶಿಯಲ್ಲಿ ಕುಳಿತಿದ್ದ ಕುಮಾರಿಲರು.

ವೇದಕಾಗಿ ಒಮ್ಮೆ ಮತ್ತು ತಮ್ಮ ಗುರುವಿಗಾಗಿ ಒಮ್ಮೆ ಕುಮಾರಿಲರು ತಮ್ಮನ್ನು ತಾವೇ ಸುಟ್ಟುಕೊಡರು.
ವೇದ ರಕ್ಷಣೆ ಒಳ್ಳೆಯ ಕೆಲಸವೇ ಆಗಿದ್ದರೂ ಗುರುವಿಗೆ ತಾನು ಬೌದ್ಧನೆಂದು ಸುಳ್ಳು ಹೇಳಿ ಅಪಚಾರ ಮಾಡಿದ್ದಕ್ಕಾಗಿ ವೇದಕ್ಕಾಗಿ ಸವೆಸಿದ ತನುವನ್ನು ಗುರು ಗೌರವಕ್ಕಾಗಿ ಸುಟ್ಟುಕೊಂಡರು.

ಅವರ ಸ್ಥೈರ್ಯ ಮತ್ತು ತ್ಯಾಗ ನಮಗೆ ಎಂದಿಗೂ ಮಾದರಿಯಾಗಿರಬೇಕಾದ್ದು..
ಒಂದು ವೇಳೆ ಕುಮಾರಿಲರು ಇಲ್ಲದೇ ಹೋಗಿದ್ದರೆ? ಅಥವಾ, ಬೇಕಾದಷ್ಟು ಹಣವಿತ್ತು ಮತಾಂತರವಾಗಬೇಕಾದ ಅನಿವಾರ್ಯತೆ ಏನೂ ಇರಲಿಲ್ಲ ಹಾಗಾಗಿ ಅವರು ವೇದಕ್ಕಾಗಿ ಹೋರಾಡದೇ ಅಂತೆಯೇ ಇದ್ದು ಬಿಟ್ಟಿದ್ದರೆ?
ಇಂದು ನಾವು ನೀವು ಈ ರೀತಿ ಇರುತ್ತಿರಲಿಲ್ಲ.
ನಮ್ಮ ದೇಶ, ಸಂಸ್ಕೃತಿ ಯಾವತ್ತೋ ಮುಗಿದು ಹೋಗುತ್ತಿತ್ತು.
ಆದರೆ ವೇದಗಳ ಮೇಲಿನ ಅವರ ಶ್ರದ್ಧೆ ಮತ್ತು ಪ್ರೀತಿ ಅವರನ್ನು ಸುಮ್ಮನಿರಲು ಬಿಡಲಿಲ್ಲ. ನಾವು ಪ್ರೀತಿಸುತ್ತಿರುವ ವಿಷಯವನ್ನು ಇನ್ನೊಬ್ಬ ಬಂದು ಹಾಳು ಮಾಡಿದರೆ ಸಹಿಸಲು ಸಾಧ್ಯವೇ?

ಅದಕ್ಕೇ ಕುಮಾರಿಲರು ಮತ್ತೆ ಮತ್ತೆ ನೆನಪಾಗುತ್ತಾರೆ...
ಕುಮಾರಿಲರು, ಬಸವಣ್ಣ ಮತ್ತು ಗಾಂಧೀಜಿಯವರ ಆ ನಿಸ್ವಾರ್ಥತೆ ಮತ್ತು ಧೈರ್ಯವೇ ನಮ್ಮ ಸಂಸ್ಕೃತಿಯ ಆಧಾರ..
ಧರ್ಮ, ದೇಶ ಮತ್ತು ತತ್ತ್ವದೆಡೆಗಿನ ಅವರ ಪ್ರೀತಿಯೇ ಇಂದು ನಮ್ಮನ್ನು ಬದುಕಿಸಿರುವುದು.. :)

Comments