ದೀಪವನ್ನು ಉರಿಸಬೇಕು.

ಚಿಕ್ಕವರಿದ್ದಾಗ ಒಲೆಯ ಬುಡದಲ್ಲಿ ಕುಳಿತು ಛಳಿ ಕಾಯಿಸಿದ ನೆನಪುಂಟೇ ?
ಶಾಲಾಕಾಲೇಜಿನ ದಿನಗಳ ಪ್ರವಾಸಗಳಲ್ಲಿ camp fire ಹಚ್ಚಿ ಸುತ್ತಲೂ ಕುಳಿತು ಹಾಡಿದ ಹಾಡುಗಳ ಹಾಗು ಕೇಳಿದ ಕಥೆಗಳು  ನೆನಪಿದೆಯೇ?
ಜೀವನದಲ್ಲಿ ಇತ್ತೀಚಿಗೆ ನಡೆದಿರುವ ಹಲವಾರು ಘಟನೆಗಳು ಈಗಾಗಲೇ ಮರೆತಿದ್ದರೂ  ಸಹಾ; ಬಹಳ ಹಿಂದೆಯೇ ನಡೆದ ಆ ಘಟನೆಗಳು ಇನ್ನೂ ಮನಸ್ಸಿನ ಪಟಲದಲ್ಲಿ ಉಳಿದಿರಲು ಕಾರಣವೇನು?

ಅಗ್ನಿ! ಅದಕ್ಕೆ ಕಾರಣ ಅಗ್ನಿ!
ಉರಿಯುತ್ತಿರುವ ಅಗ್ನಿಯ ಮುಂದೆ ನಡೆದ ಘಟನೆಗಳು ಮನದಲ್ಲಿ ಅಚ್ಚೊತ್ತಲ್ಪಡುತ್ತವೆ. 
ಯಜ್ಞದಲ್ಲಿ ಮಾಡಿದ ಪ್ರಾರ್ಥನೆಗಳು ಫಲಿಸಲು, ಅಗ್ನಿಯು ಕೊಟ್ಟ ಆ ಮನದ ಜಾಗೃತಿಯೇ ಕಾರಣ.
ಅಗ್ನಿ ಎಂದರೆ ಪರಿಶುದ್ಧತೆ; ತಾನೂ ಶುದ್ಧವಾಗಿದ್ದು, ತನ್ನ ಒಳ ಬಂದದ್ದೆಲ್ಲವನ್ನೂ ಅದು ಶುದ್ಧ ಮೂಲಸ್ವರೂಪಕ್ಕೇ ಏರಿಸುತ್ತದೆ. 

ಅಗ್ನಿಗೆ ಉರಿಯುವ ಗುಣವಿದೆ; ಅಂತೆಯೇ, ಬೆಳಗುವ ಗುಣವೂ ಇದೆ. ಅಗ್ನಿಯು ನಿಗ್ರಹವನ್ನೂ ಮಾಡಬಲ್ಲದು, ಅನುಗ್ರಹವನ್ನೂ ಮಾಡಬಲ್ಲದು. ಹಾಗಾಗಿಯೇ ಅಗ್ನಿಗೆ ನಮ್ಮ ಸಂಸ್ಕೃತಿಯಲ್ಲಿ ವಿಶೇಷವಾದ ಸ್ಥಾನ ಇರುವುದು. ದುರ್ಗುಣಗಳನ್ನೂ ದೋಷಗಳನ್ನೂ ಕಳೆಯಬೇಕು ಮತ್ತು ಸದ್ಗುಣಗಳನ್ನು ಬೆಳೆಸಿಕೊಳ್ಳಬೇಕು; ಹಾಗಾದರೆ ಮಾತ್ರ ಜೀವನವು ಸುಂದರ ಮತ್ತು ಸಾರ್ಥಕ. ಜೀವನದ ಸಾರ್ಥಕ್ಯದ ಸಾಧನೆಗಾಗಿಯೇ ನಿತ್ಯವೂ ಮನೆಯಲ್ಲಿ ದೀಪ ಉರಿಸುವ ಪದ್ಧತಿ ನಮ್ಮಲ್ಲಿ. 

ದೀಪ ಬೆಳುಗುವಾಗ ಹೇಳಬೇಕಾದ ಸಂಕಲ್ಪ ವಾಕ್ಯವೊಂದುಂಟು:

ಶುಭಂ ಕರೋತಿ ಕಲ್ಯಾಣಂ ಆರೋಗ್ಯ ಧನ ಸಂಪದಮ್ ।
ಶತ್ರುಬುದ್ಧಿ ವಿನಾಶಾಯ ದೀಪಜ್ಯೋತಿರ್ನಮೋಸ್ತುತೇ ।।

ಶುಭಕ್ಕಾಗಿ, ಆರೋಗ್ಯಕ್ಕಾಗಿ, ಇನ್ನೊಬ್ಬನಲ್ಲಿ ನಮಗಿರಬಹುದಾದ ವೈರ ಭಾವದ ನಾಶಕ್ಕಾಗಿ, ಪಾಪದ ನಾಶಕ್ಕಾಗಿ ದೀಪವನ್ನು ಹಚ್ಚುವುದು. 

ದೀಪ ಹಚ್ಚಿದ ಮಾತ್ರಕ್ಕೆ ಎಲ್ಲ ದೋಷಗಳು ನಿವಾರಣೆ ಆಗುತ್ತದೋ? 
ಇಲ್ಲ! ಹಾಗಾಗಬೇಕಾದರೆ, ಸತ್ವಗುಣದ ವೃದ್ಧಿ ಆಗಬೇಕು. ಸತ್ವಗುಣವು ಎಷ್ಟು ಹೆಚ್ಚೋ ಬೆಳಕೂ ಅಷ್ಟು ಹೆಚ್ಚು.
ಗುಣಗಳು ಮೂರು - ನಿರ್ಮಲತ್ವ ಮತ್ತು ಜ್ಞಾನ ಇದು ಸತ್ವಗುಣದ ಲಕ್ಷಣ; ರಾಗ ಮತ್ತು ತೃಷ್ಣೆ ಇವು ರಜಸ್ಸು; ಆಲಸ್ಯ ಮತ್ತು ನಿದ್ದೆಗಳು ತಮೋರೂಪವು. ನಾವು ಯಾವ ಗುಣವನ್ನು ನಮ್ಮೊಳಗೇ ಹೆಚ್ಚು ಪೋಷಿಸುತ್ತೇವೆಯೋ ಆಯಾ ಪ್ರಕಾರವಾಗಿ ನಮ್ಮ ಆಹಾರ, ನಮ್ಮ ಕೆಲಸ, ನಮ್ಮ ಪ್ರವೃತ್ತಿ ಹಾಗೂ ನಮ್ಮ ಅರಿವಿನ ಮಟ್ಟ ಮತ್ತು ಪರಿಧಿ ಬದಲಾಗುತ್ತಾ ಹೋಗುತ್ತದೆ. 

ಹಾಗಾಗಿ,
ಜೀವನದ ಸಕಲ ರಜೋಗುಣರೂಪದ ಪ್ರತಿನಿಧಿಯಾದ ಎಣ್ಣೆಯನ್ನು ತಮೋಗುಣರೂಪಿ ಬತ್ತಿಯಲ್ಲಿ ಉರಿಸಿದಾಗ ಬರುವ ಸತ್ವದ ಜ್ವಾಲೆಯು ಜೀವನದ ಸತ್ಯವನ್ನು ಕಾಣಿಸಬೇಕು ಮತ್ತು ಬದುಕನ್ನು ಬೆಳಗಬೇಕು; ಎಂಬುದು ಆಶಯ. 
ದಿನದ ಸಂಧ್ಯಾಕಾಲಗಳಲ್ಲಿ (ಸೂರ್ಯ ಉದಯಿಸುವ ಮತ್ತು ಅಸ್ತವಾಗುವ ಸಮಯದಲ್ಲಿ) ದೀಪವನ್ನು ಬತ್ತಿಯ ಮೇಲೆ ಮುತ್ತಿನ ಮಣಿಯಷ್ಟೇ ಹಚ್ಚಿ ಇಟ್ಟು, ಅದರ ಬಳಿ ಕೆಲವು ಕಾಲ ಕುಳಿತರೆ, ಅದನ್ನೇ ಧ್ಯಾನಿಸಿದರೆ, ಅದರ ಪ್ರಭಾವ ಅಪಾರ. ಸತ್ವ ಗುಣದ ವೃದ್ಧಿಗೆ ಮತ್ತು ಏಕಾಗ್ರತೆಯ ಸಿದ್ಧಿಗೆ ದೀಪಪ್ರಜ್ವಲನೆ ಎಂಬುದು ಸುಲಭೋಪಾಯ. 

ಹಿಂದಿನ ಕಾಲದಲ್ಲಿ ದೀಪವೇ ಬೆಳಕಿನ ಸ್ರೋತ ಆಗಿದ್ದದ್ದರಿಂದ ಸಂಜೆಯಾಗುತ್ತಿದ್ದಂತೆ ದೀಪ ಬೆಳಗುವುದು ಸಹಜ ಮತ್ತು ಅನಿವಾರ್ಯ ಆಗಿತ್ತು. ಈಗ ದೀಪದ ಜಾಗದಲ್ಲಿ ವಿದ್ಯುತ್ತಿನ ಬಲ್ಬುಗಳು ಬಂದಿವೆ. ಅವೆರಡುವು ಮಾಡುವ ಕೆಲಸ ಒಂದೇ, ಇದ್ದದ್ದನ್ನು ಇರುವಂತೆಯೇ ಕಾಣಲು ನಮಗೆ ಸಹಕರಿಸುವುದು. ವಿದ್ಯುತ್ತಿನ ದೀಪ ಬೆಳಗಿದರೆ ಮನೆಯೊಳಗೆ ಬೆಳಕಾಗಬಹುದು, ಮನದೊಳಗೂ ಬೆಳಕಾಗಬೇಕಾದರೆ ಇಂದಿಗೂ ದೀಪವನ್ನೇ ಬೆಳಗಬೇಕು.

ಮನವು ಬೆಳಕಾದರೆ, ಜೀವನದಲ್ಲಿ ಇರುವುದೆಲ್ಲವೂ ಇರುವಂತೆಯೇ ಕಾಣುತ್ತದೆ; ಆಗ ದೀಪಪ್ರಜ್ವಲನದ ಸಂಕಲ್ಪವಾಕ್ಯವು ಹಂತಹಂತವಾಗಿ ಸಾಧಿಸಲ್ಪಡುತ್ತದೆ. 
ನಿತ್ಯವೂ ಮನೆಯಲ್ಲಿ ದೀಪ ಇಡುವುದೆಂದರೆ ಅದು ಸಂಪ್ರದಾಯವೂ ಶಿಷ್ಟಾಚಾರವೂ ಮಾತ್ರವಲ್ಲ; ಅದೊಂದು ಶಿಸ್ತು!
ಸಕಲ ಸೌಭಾಗ್ಯಗಳೂ ದೀಪಪ್ರಜ್ವಲನೆಯಿಂದ ಪ್ರಾಪ್ತವಾಗುತ್ತವೆ ಎಂಬುದು ಅತಿಶಯೋಕ್ತಿ ಅಲ್ಲ. 

ಹಾಗಿದ್ದರೆ,
ಅನ್ಯಾನ್ಯ ಕಾರಣಗಳಿಂದ ಮನೆಯ ದೀಪವನ್ನು ಉರಿಸಲು ಆಗದೇ ಹೋದರೆ,ಕೆಡುಕಾಗುವುದೇನು?
- ಹಾಗೇನು ಇಲ್ಲ. 
ಆದರೆ, "ರಕ್ಷಣೆ ಆಗಬೇಕು; ಶುಭವಾಗಬೇಕು" ಎಂಬ ಸಂಕಲ್ಪದೊಂದಿಗೆ ನಮಗಾಗಿ ದೀಪವೊಂದು ಉರಿಯುತ್ತಿದ್ದರೆ, 

- ನಮಗದು ಕ್ಷೇಮ
- ನಮ್ಮ ಬಾಳಿಗೊಂದು ಬೆಳಕು
- ನಮ್ಮ ಜೀವಶಕ್ತಿಗದು ಸ್ರೋತ
- ನಮ್ಮಲ್ಲಿನ ಕೆಡುಕುಗಳಿಗೊಂದು ಕೊನೆ
- ನಮ್ಮ ದುರಿತಗಳಿಗಲ್ಲದಕ್ಕೆ ಒಂದು ಪರಿಹಾರ.
ದೀಪ ಸದಾ ಉರಿಯುತ್ತಿರಲಿ; ಬದುಕಿನ ದಾರಿ ಸದಾ ಬೆಳಕಿನಿಂದ ಕೂಡಿರಲಿ.

Comments