ದೀಪಕಾಣಿಕೆ ಕೊಡಬೇಕು

ದೀಪವನ್ನು ಉರಿಸಬೇಕು. 'ರಕ್ಷಣೆ ಆಗಬೇಕು; ಶುಭವಾಗಬೇಕು' ಎಂಬ ಸಂಕಲ್ಪದೊಂದಿಗೆ ಮನೆಯಲ್ಲಿ ದೀಪವು ಸದಾ ಉರಿಯುತ್ತಿರಬೇಕು, ಆ ಮೂಲಕ, ಬದುಕಿನ ದಾರಿ ಸದಾ ಬೆಳಗಿರಬೇಕು; ಇದು ದೀಪಪ್ರಜ್ವಲನದ ಆಶಯ. ಸ್ವಂತಕೆ ಒತ್ತು ಇಲ್ಲವಾಗಿಸಿ, ತಮ್ಮ ತಪಸ್ಸನ್ನೆಲ್ಲ ಧಾರೆಯೆರೆದು ಸಮಾಜವನ್ನು ಎತ್ತಲು ಶ್ರಮಿಸುತ್ತಿರುವ ಎಲ್ಲ ಸಂತ ಸದ್ಗುರುಗಳ ಜೀವಿತದ ಆಶಯವೂ ಅದೇ; ಶಿಷ್ಯಕೋಟಿಯ ಬಾಳು ಬೆಳಕಾಗಬೇಕು ಎಂಬುದು.

ಗುರುವೆಂದರೆ - ತಾನು ಉರಿದು, ಸಮಾಜಕ್ಕೆ ಬೆಳಕು ಕೊಡುವ ದೀಪ!

ಅನ್ಯಾನ್ಯ ಕಾರಣಗಳಿಂದ ದೀಪ ಉರಿಸಲಾಗದ ಪರಿಸ್ಥಿತಿಯು ಮನೆಗಳಲ್ಲಿ ಉದ್ಭವಿಸಿದರೂ ಸಹ, ಸದಾಕಾಲವೂ ಶಿಷ್ಯರ ಕ್ಷೇಮವನ್ನೇ ಸಂಪ್ರಾರ್ಥಿಸುತ್ತಾ, ದೀಪವೊಂದು ಅನಾದಿಕಾಲದಿಂದಲೂ ಶ್ರೀ ರಾಮಚಂದ್ರಾಪುರ ಮಠದಲ್ಲಿ ಅನಾಹತವಾಗಿ~ಅವಿಚ್ಛಿನ್ನವಾಗಿ ಉರಿಯುತ್ತಲೇ ಇದೆ.

ನಮ್ಮದೇ ಕ್ಷೇಮಕ್ಕಾಗಿ ತಾನು ಉರಿದೂ ನಮ್ಮನ್ನು ಬೆಳಗುವ ಆ ದೀಪದ ರಕ್ಷಣೆ~ಪೋಷಣೆಯ ಜವಾಬ್ದಾರಿ ನಮ್ಮದೇ. ಮಠದಲ್ಲಿ ಉರಿಯುವ ಆ ದೀಪದ ಎಣ್ಣೆಗಾಗಿ ಪ್ರತಿಶಿಷ್ಯಮನೆಯೂ ಪ್ರತೀವರ್ಷ ಒಂದು ಸಣ್ಣ ಸಾಂಕೇತಿಕ ಕಾಣಿಕೆಯನ್ನು ಕೊಡುವುದುಂಟು. ಅದೇ ದೀಪಕಾಣಿಕೆ. ಅದು, ನೂರ ಒಂದು ರೂಪಾಯಿ ಮಾತ್ರ.

ಬಡವನಿಗೂ ಅಷ್ಟೇ, ಬಲ್ಲಿದನಿಗೂ ಅಷ್ಟೇ; ಪಂಡಿತನಿಗೂ ಅಷ್ಟೇ, ಪಾಮರನಿಗೂ ಅಷ್ಟೇ.
ಬೆಳಕನ್ನು ಹೊರಗಷ್ಟೇ ಅಲ್ಲದೆ ಒಳಗೂ ಬಯಸುವ ಶ್ರೀಮಠದ ಎಲ್ಲ ಪರಂಪರಾಗತ ಶಿಷ್ಯರೂ ದೀಪಕಾಣಿಕೆಯನ್ನು ವರ್ಷಂಪ್ರತಿ ಸಮರ್ಪಿಸುವುದು ಸಂಪ್ರದಾಯ.
ದೀಪಕಾಣಿಕೆಯು ಕೃತಜ್ಞತೆಯ ಕುರುಹು; ದೀಪಕಾಣಿಕೆಯು ಬದ್ಧತೆಯ ಸಂಕೇತ.

ಒಂದೇ ಮನೆಯ ಸದಸ್ಯರು ಎರಡು ಕಡೆ ವಾಸ್ತವ್ಯವಿದ್ದರೆ, ಅಡಿಗೆಯನ್ನು ಎರಡಾಗಿ ಮಾಡಿದಂತೆಯೇ ದೀಪಕಾಣಿಕೆಯನ್ನೂ ಎರಡಾಗಿ ಕೊಡುವುದು ನಿರ್ದೇಶಿತವಾದಂತಹ ಕ್ರಮ.

ಈ ಹಿಂದೆ, ಪ್ರತೀವರ್ಷ ದೀಪಕಾಣಿಕೆಯ ಹಣವನ್ನು ಕೂಡಿಟ್ಟು, ಶ್ರೀಗುರುಗಳ ಸವಾರಿಯು ತಮ್ಮ ತಮ್ಮ ಊರಿಗೆ ಚಿತ್ತೈಸಿದಾಗ ಒಟ್ಟಾಗಿ ಅವರಿಗೇ ಸಮರ್ಪಣೆ ಮಾಡುವುದು ರೂಢಿಯಲ್ಲಿ ಇತ್ತಂತೆ; ಅದು ಆ ಕಾಲದ ಅನಿವಾರ್ಯತೆ. ಇದೀಗ ಕಾಲ ಬದಲಾಗಿದೆ, ತಂತ್ರಜ್ಞಾನ~ವಿಜ್ಞಾನಗಳು ಅಭಿವೃದ್ಧಿ ಹೊಂದಿದೆ, ಸರಕಾರಗಳು~ನ್ಯಾಯವ್ಯವಸ್ಥೆ~ಕರ-ದಂಡಸಂಹಿತೆಗಳು ಹೊಸತಾಗಿವೆ. ಹಾಗೆಯೇ ಕಾಲಕ್ಕೆ ತಕ್ಕಂತೆ ಹೆಜ್ಜೆ ಹಾಕುತ್ತ, ಶ್ರೀಮಠವೂ ಹೊಸತನಕ್ಕೆ ತೆರೆದುಕೊಂಡಿದೆ. ಲೆಕ್ಕಪತ್ರವು ತಂತ್ರಜ್ಞಾನಚಾಲಿತವಾಗಿದೆ, ಆಡಳಿತವು ಕಾಗದಮುಕ್ತ ಆಗುವತ್ತ ಸಾಗುತ್ತಿದೆ.

ಬದಲಾದ ಕಾಲದಲ್ಲಿ, ದೀಪಕಾಣಿಕೆಯ ಸಮರ್ಪಣೆ~ಸಂಗ್ರಹಗಳಿಗೆ ಹೊಸವಿಧಾನ ಮತ್ತು ಕಾಲಮಿತಿಗಳು ಈಗಿನ ಅಗತ್ಯಗಳಲ್ಲಿ ಒಂದು. ಶ್ರೀಮಠದ ನಿಷ್ಠ ಶಿಷ್ಯರಿಗೆ ಮಕರಸಂಕ್ರಮಣದ ನಂತರದ 16 ದಿನಗಳು ದೀಪಕಾಣಿಕೆಯ ಸಮರ್ಪಣಾ ಪರ್ವಕಾಲ.
ಅಂದರೆ,

ಪ್ರತೀವರ್ಷ ಜನವರಿ 15ರಿಂದ ಜನವರಿ 31ರ ಒಳಗಾಗಿ, ಪ್ರತೀ ಗುರಿಕ್ಕಾರರ ಸುಪರ್ದಿಯ ಎಲ್ಲ ಮನೆಗಳು ಒಟ್ಟಾಗಿ, ಗುರುವಂದನೆ ನಡೆಸಿ, ಶ್ರೀಗುರುಗಳ ಚಿತ್ರಪಟದಲ್ಲಿ ಅವರ ದಿವ್ಯ ಸಾನ್ನಿಧ್ಯವನ್ನು ಕಲ್ಪಿಸಿ, ದೀಪಕಾಣಿಕೆಯ ಮೊತ್ತವನ್ನು ಸಮರ್ಪಿಸುವುದು ಈಗಿನ ಕ್ರಮ.

ಶ್ರೀಗಳ ನೇರ ಪ್ರತಿನಿಧಿಗಳೇ ಆದ ಗುರಿಕ್ಕಾರರುಗಳು, ಈ ಕ್ರಮದಲ್ಲಿ ಸಂಗ್ರಹ ಆದ ಮೊತ್ತವನ್ನು ಶ್ರೀಕೋಶಕ್ಕೆ ತಲುಪಿಸುತ್ತಾರೆ.

ಈ ಪ್ರಕಾರವಾಗಿ, ಒಂದುವೇಳೆ, ಮನೆಯಲ್ಲಿ ದೀಪ ಬೆಳಗದಿದ್ದರೂ ಮನೆಯ ದೀಪವು ಆರದಂತೆ, ಕೃಪೆಯಿಟ್ಟು ಉರಿಯುವ ದೀಪಕ್ಕೆ ಕಿಂಚಿತ್ತು ಕಾಣಿಕೆ ತಾನೂ ಕೊಟ್ಟ ಧನ್ಯತಾಭಾವ ಎಲ್ಲ ಶಿಷ್ಯರದ್ದೂ ಆಗುತ್ತದೆ.
ಹಾಗಾಗಿ, ದೀಪಕಾಣಿಕೆ ಕೊಡಬೇಕು. ಅದು ಸೌಭಾಗ್ಯ.

Comments